Home News ಸಾದಲಿ ಗ್ರಾಮದ ಬಳಿ ಮಳೆಗೆ ಹುಟ್ಟಿದ ಅಣಬೆಗಳು

ಸಾದಲಿ ಗ್ರಾಮದ ಬಳಿ ಮಳೆಗೆ ಹುಟ್ಟಿದ ಅಣಬೆಗಳು

0

ಈಚೆಗೆ ತಾಲ್ಲೂಕಿನಾದ್ಯಂತ ಬಿದ್ದ ಮಳೆ ನೀರಿನಿಂದಾಗಿ ಅಣಬೆಗಳು ಹುಟ್ಟಿಕೊಂಡಿದ್ದು, ಹಲವರ ಬಾಯಿಯರುಚಿ ತಣಿಸಿದೆ.
ತಾಲ್ಲೂಕಿನ ಸಾದಲಿ ಗ್ರಾಮದ ಬಳಿ ಈಚೆಗೆ ಬಿದ್ದ ಮಳೆಗೆ ಸುಂದರವಾದ ಅಣಬೆಗಳು ಹುಟ್ಟಿದ್ದು, ವಿಶಿಷ್ಠ ಖಾದ್ಯವಾಗಿ ಬಳಕೆಯಾಗುತ್ತಿದೆ.
ಅಣಬೆಗಳು ವಿಶಿಷ್ಟವಾದ ಸೃಷ್ಟಿ. ಬೇಸಗೆಯಲ್ಲಿರದ ಅಣಬೆಗಳು ಮಳೆಯ ಸಂದರ್ಭದಲ್ಲಿ ಕೊಡೆಗಳ ಮಾದರಿಯಲ್ಲಿ ಮೂಡಲಾರಂಭಿಸುತ್ತದೆ. ನಾನಾ ಆಕಾರದಲ್ಲಿ ಸೃಷ್ಟಿಯಾದರೂ, ಕೊಡೆಯಾಕಾರ ಹೊಂದಿರುವ ಅಣಬೆಗಳಿಗೆ ನಾಯಿಕೊಡೆ ಎಂದೇ ಎಲ್ಲರೂ ಕರೆಯುತ್ತರೆ. ಮರಗಳ ಬುಡದಲ್ಲಿ, ಕೊಳೆತ ಮರದ ತೊಗಟೆಗಳಲ್ಲಿ, ತರೆಗೆಲೆಗಳು, ಹುಲ್ಲಿನ ರಾಶಿಯಲ್ಲಿ ಅಣಬೆಗಳು ಹುಟ್ಟಿಕೊಳ್ಳುತ್ತವೆ.
ಕೃತಕವಾಗಿ ಅಣಬೆಯನ್ನು ಬೆಳೆಸಲಾಗುತ್ತದೆಯಾದರೂ, ಮಳೆಗಾಲದಲ್ಲಿ ನೈಸರ್ಗಿಕವಾಗಿ ಬೆಟ್ಟ ಗುಡ್ಡದಲ್ಲಿ ಸಿಗುವ ಅಣಬೆಗಳ ಆಕರ್ಷಣೆ ಹೆಚ್ಚು. ಅಣಬೆಯಿಂದ ಹಲವು ತಿನಿಸುಗಳನ್ನು ತಯಾರಿಸಬಹುದು. ಇವುಗಳ ಆಹಾರ ಪದಾರ್ಥವನ್ನು ಸಸ್ಯಾಹಾರಿಗಳು ‘ಮಾಂಸಾಹಾರಿ’ ರುಚಿ ಹೊಂದಿದೆ ಎಂದು ಹೇಳುತ್ತಾರೆ.
ಮಷ್ರೂಮ್ ಅಥವಾ ಅಣಬೆ ಅತ್ಯಧಿಕ ವಿಟಾಮಿನ್ ನಿಂದ ಕೂಡಿದ್ದು, ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ. ಹಳ್ಳಿ ಪ್ರದೇಶದಲ್ಲಿ ವಾಸಿಸುವವರಿಗೆ ಅಣಬೆಗಳು ಬೇಕಾದಷ್ಟು ಪ್ರಮಾಣದಲ್ಲಿ ಸಿಗುತ್ತದೆಯಾದರೂ ನಗರ ಪ್ರದೇಶದ ಜನರು ದುಪ್ಪಟ್ಟು ಬೆಲೆ ನೀಡಿ ಮಾರುಕಟ್ಟೆಯಲ್ಲಿ ಖರೀದಿ ಮಾಡುವವರಿದ್ದಾರೆ. ಒಟ್ಟಿನಲ್ಲಿ ಮಳೆಗಾಲ ಬಂತೆಂದರೆ ಅಣಬೆಗಳಿಗೆ ಬಾರಿ ಬೇಡಿಕೆಯಂತೂ ಇರುವುದು ನಿಜ.
‘ಅಣಬೆ ಅತ್ಯುತ್ತಮ ಆಹಾರ. ಗ್ರಾಮೀಣ ಪ್ರದೇಶಗಳಲ್ಲಿ ಸಹಜವಾಗಿ ಬೆಳೆಯುವ ಅಣಬೆ ಆರಿಸಿ ತಿನ್ನುತ್ತಾರಾದರೂ, ಆಯ್ಕೆಮಾಡುವುದು ತಿಳಿಯದಿದ್ದಾಗ ವಿಷಕಾರಿ ಅಣಬೆ ತಿಂದು ತೀವ್ರ ತೊಂದರೆಗಳಿಗೆ ಸಿಲುಕಿದವರ ಉದಾಹರಣೆಗಳು ಅಪಾರ. ನಗರಪ್ರದೇಶಗಳಲ್ಲಿ ಕೃತಕ ರೀತಿ ಅಣಬೆ ಕೃಷಿಯಿದೆ. ಸ್ವಾದಿಷ್ಟ ಅಣಬೆ ತಿನ್ನುವುದು ಇತ್ತೀಚಿನ ದಶಕಗಳಲ್ಲಿ ಬಂದ ರೂಢಿಯೆನ್ನಲ್ಲ. ಶತಶತಮಾನಗಳಿಂದಲೂ ಇದರ ಸೇವನೆಯಿದೆ.
ಅಣಬೆಯಲ್ಲಿ ಕೆಲವು ವಿಶೇಷ ಅಂಶಗಳಿವೆ. ಇದು ಒಂದು ರೀತಿಯಲ್ಲಿ ಪೌಷ್ಟಿಕಾಂಶಗಳ ಅಗರ. ಸಕ್ಕರೆ, ಕೊಬ್ಬಿನ ಅಂಶ ಕಡಿಮೆ. ಇದರಿಂದ ಮಧುಮೇಹಿಗಳು-, ಹೃದ್ರೋಗದ ಸಮಸ್ಯೆಗಳಿಂದ ಬಳಲುತ್ತಿರುವವರೂ ಸೇವಿಸಬಹುದು. ಮಕ್ಕಳಿಗೆ ಇದು ಅತ್ಯುತ್ತಮ ಪೋಷಕಾಂಶ ನೀಡುವ ಆಹಾರ. ತಿನ್ನಲು ಅರ್ಹವಾದ ಅಣಬೆ ಸೇವನೆಯಿಂದ ಮಕ್ಕಳ ಬೆಳವಣಿಗೆಯೂ ಚೆನ್ನಾಗಿರುತ್ತದೆ. ಮುಖ್ಯವಾಗಿ ಇವರಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.
ಸಾದಲಿ ಬಳಿ ಸಿಕ್ಕ ಅಣಬೆಗಳನ್ನು ಗ್ರಾಮಸ್ಥರು ರುಚಿಕರ ಖಾದ್ಯಗಳನ್ನು ತಯಾರಿಸಿ ಬಂಧು ಮತ್ತು ಮಿತ್ರರೊಂದಿಗೆ ಹಂಚಿ ತಿಂದರು’ ಎಂದು ಶಿಕ್ಷಕ ಸಂತೋಷ್ ತಿಳಿಸಿದರು.

error: Content is protected !!