Home News ಸಾದಲಿ ಯಶಸ್ವಿ ಬಂದ್ ; ಹೊಸ ತಾಲ್ಲೂಕು ಮಾಡಲು ಒತ್ತಾಯ

ಸಾದಲಿ ಯಶಸ್ವಿ ಬಂದ್ ; ಹೊಸ ತಾಲ್ಲೂಕು ಮಾಡಲು ಒತ್ತಾಯ

0

ತಾಲ್ಲೂಕಿನ ಸಾದಲಿ ಹೋಬಳಿ ಕೇಂದ್ರವನ್ನು ಹೊಸ 50 ತಾಲ್ಲೂಕುಗಳ ಪಟ್ಟಿಯಲ್ಲಿ ಸೇರಿಸಿ ಘೋಷಿಸಬೇಕೆಂದು ಒತ್ತಾಯಿಸಿ ಮಂಗಳವಾರ ಸಾದಲಿ ಹೋಬಳಿ, ಮಿಟ್ಟೇಮರಿ ಹೋಗಳಿ ಹಾಗೂ ಸುತ್ತಮುತ್ತ ಗ್ರಾಮಸ್ಥರು ಒಗ್ಗೂಡಿ ಸಂಪೂರ್ಣ ಬಂದ್ ಮಾಡಿ ಪ್ರತಿಭಟಿಸಿದರು.
ಸಂತೆ, ಬ್ಯಾಂಕುಗಳು, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಜನರು ಸ್ವಯಂಪ್ರೇರಿತರಾಗಿ ಬಂದ್ ಮಾಡುವ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಸಾದಲಿಯ ಅಂಬೇಡ್ಕರ್ ಪ್ರತಿಮೆಯ ಬಳಿ ಪೂಜೆ ಸಲ್ಲಿಸುವ ಮೂಲಕ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು.
ಕಳೆದ ಮೂರ್ನಾಕು ದಶಕಗಳಿಂದಲೂ ಶ್ರೀ ಸತ್ಯಸಾಯಿ ಸಾದಲಿ ಹೊಸ ತಾಲ್ಲೂಕು ಸಮಿತಿಯ ಮುಖಾಂತರ ಅನೇಕ ಹೋರಾಟಗಳು, ರಸ್ತೆ ತಡೆ, ಉಪವಾಸ ಸತ್ಯಾಗ್ರಹ, ಅಂಚೆ ಚಳುವಳಿ ಮೂಲಕ ಎಲ್ಲಾ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ವತಿಯಿಂದ ಸರ್ಕಾರಕ್ಕೆ ಹಲವಾರು ಪತ್ರಗಳನ್ನು ನೀಡಿದ್ದೇವೆ. ಗದ್ದಿಗೌಡರ್ ಸಮಿತಿ, ಎಂ.ಬಿ.ಪ್ರಕಾಶ್ ವರದಿಗಳಲ್ಲಿಯೂ ಸಾದಲಿ ಕೇಂದ್ರವನ್ನು ತಾಲ್ಲೂಕು ಮಾಡಲು ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ. ಆದರೆ ಈಗ ರಾಜ್ಯ ಸರ್ಕಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾವೊಂದು ಹೊಸ ತಾಲ್ಲೂಕು ಘೋಷಣೆ ಮಾಡಿಲ್ಲ.
ಸಾದಲಿಯು ಜಿಲ್ಲೆಯ ಮಧ್ಯಭಾಗದಲ್ಲಿದ್ದು, ತಾಲ್ಲೂಕಾಗಲು ಎಲ್ಲಾ ಅರ್ಹತೆಗಳನ್ನು ಹೊಂದಿದೆ. ಸಾದಲಿ ಸುತ್ತಮುತ್ತಲಿನ ಜನಸಂಖ್ಯೆ 1.50 ಲಕ್ಷ ಹಾಗೂ 126 ಗ್ರಾಮಗಳಿವೆ. ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದ ಕಾರಣ ಸಾದಲಿ ಕೇಂದ್ರವನ್ನು ಹೊಸ ತಾಲ್ಲೂಕು ಮಾಡಲು ಆಗ್ರಹಿಸಿ ಬಂದ್ ಆಚರಿಸುತ್ತಿದ್ದೇವೆ. ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆಯನ್ನು ಕಳಿಸುತ್ತಿರುವುದಾಗಿ ಶ್ರೀ ಸತ್ಯಸಾಯಿ ಸಾದಲಿ ಹೊಸ ತಾಲ್ಲೂಕು ಸಮಿತಿಯ ಗೌರವಾಧ್ಯಕ್ಷ ಜಿ.ವಿ.ತಿಮ್ಮರಾಜು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋವಿಂದರಾಜು, ನಾರಾಯಣಸ್ವಾಮಿ, ವೈ.ಎನ್.ನಾಗರಾಜು, ಗಣೇಶ್, ರಾಮಕೃಷ್ಣಪ್ಪ, ಮಲ್ಲಿಕಾರ್ಜುನ, ಎಸ್.ಎನ್.ಸಾಯಿಪ್ರಶಾಂತ್, ಕುಮಾರ್, ಶ್ರೀನಿವಾಸ್, ಹನುಮಪ್ಪ, ತಿರುಮಳಪ್ಪ, ವಿಜಯಕುಮಾರ್, ನರಸಿಂಹಪ್ಪ, ಗಂಗಾಧರ, ಡಿ.ವಿ.ಪ್ರಸಾದ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!