ಪ್ರಚಲಿತ ವಿದ್ಯಮಾನ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ‘ಚದುರಂಗ’ ಎಂಬ ಕಿರುಚಿತ್ರದ ಮೂಲಕ ಮಾಡುತ್ತಿರುವುದಾಗಿ ನಿರ್ದೇಶಕ ಮೇಲೂರು ರಂಗ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಹೊರವಲಯದ ಸಾಯಿನಾಥ ಜ್ಞಾನ ಮಂದಿರದಲ್ಲಿ ಗುರುವಾರ ಸಂಜೆ ‘ಚದುರಂಗ’ ಕಿರುಚಿತ್ರದ ಟ್ರೇಲರ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉತ್ತಮ ಭವಿಷ್ಯವುಳ್ಳ ಯುವಜನರು ದಾರಿದಪ್ಪದಂತೆ ಎಚ್ಚರಿಕೆ ನೀಡುವ ಸಂದೇಶವಿದೆ. ಮಾದಕ ವ್ಯಸನ ಹೇಗೆ ದಾರಿ ತಪ್ಪಿಸಬಲ್ಲದು ಎಂಬ ವಿಷಯವೂ ಈ ಚಿತ್ರದಲ್ಲಿದೆ. ಶಿಡ್ಲಘಟ್ಟ, ಮೇಲೂರು, ಮಳ್ಳೂರು, ವಿಜಯಪುರದ ಗ್ರಾಮೀಣ ಪ್ರತಿಭೆಗಳು ಒಗ್ಗೂಡಿ ಕಿರುಚಿತ್ರ ತಯಾರಿಕೆಯ ಹೊಸ ಪ್ರಯತ್ನವನ್ನು ಮಾಡಿದ್ದೇವೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಸುಂದರ ಪರಿಸರಗಳಲ್ಲಿ ಚಿತ್ರೀಕರಣವನ್ನು ಮಾಡಿದ್ದೇವೆ.
ನಿರ್ಮಾಪಕರು ಮೇಲೂರಿನ ಚೇತನ್ ಗೌಡ. ನಾಯಕ ನಟರಾಗಿ ಮೇಲೂರಿನ ರವಿ ಕಿರಣ್ ಮತ್ತು ನಾಗೇಂದ್ರಬಾಬು, ನಟಿಯರಾಗಿ ಶಿಡ್ಲಘಟ್ಟದ ಸುಷ್ಮ ಮತ್ತು ಮೇಲೂರು ಪಲ್ಲವಿ ನಟಿಸಿದ್ದಾರೆ. ಪತ್ರಿಕೆ ಮತ್ತು ಮಾದ್ಯಮಗಳಲ್ಲಿ ಸ್ಥಳೀಯ ಕಲಾವಿದ ಎಟಿಎಂ ಕಾವಲುಗಾರ ಮುನಿರಾಜು ಅವರ ಬಗ್ಗೆ ತಿಳಿದು ಅವರಿಗೆ ಪೋಷಕ ಪಾತ್ರದಲ್ಲಿ ನೀಡಿದ್ದು, ಉತ್ತಮವಾಗಿ ನಟಿಸಿದ್ದಾರೆ ಎಂದು ವಿವರಿಸಿದರು.
ಸಾಯಿನಾಥ ಜ್ಞಾನ ಮಂದಿರದ ಧರ್ಮದರ್ಶಿ ನಾರಾಯಣಸ್ವಾಮಿ, ಸೀತಾರಾಮರೆಡ್ಡಿ, ಛಾಯಾಗ್ರಾಹಕರಾದ ಕಂಬದಹಳ್ಳಿ ಪ್ರದೀಪ್, ಮಂಡೂರು ಅಂಬರೀಷ್, ಮನೋಹರ್. ಶಿಡ್ಲಘಟ್ಟ ಕೆ.ಎನ್.ಮುನಿರಾಜು, ಸುಷ್ಮ, ಪಲ್ಲವಿ, ಆಕರ್ಷ್, ಮಂಜುನಾಥಗೌಡ, ವಿನೋದ್, ಭರತ್, ಮನೋಹರ್, ಪವನ್, ಚಂದನ್, ರಾಕೇಶ್ ಹಾಜರಿದ್ದರು.