ಗ್ರಾಮೀಣ ಪ್ರದೇಶಗಳನ್ನು ಬಯಲು ಶೌಚ ಮುಕ್ತ ಮಾಡುವ ನಿಟ್ಟಿನಲ್ಲಿ ಜನರಿಗೆ ಪ್ರತ್ಯೇಕವಾಗಿ ಗುಂಪು ಶೌಚಾಲಯಗಳನ್ನು ನಿರ್ಮಿಸಿರುವುದು ಹೆಮ್ಮೆಯ ವಿಷಯ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಶಿವಕುಮಾರ್ ಹೇಳಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಗಿರಿಜನ ಕಾಲೋನಿಯಲ್ಲಿ ನಿರ್ಮಿಸಲಾಗಿರುವ ಸಾರ್ವಜನಿಕ ಶೌಚಾಲಯಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಜನರು ಮನಸ್ಸು ಮಾಡಿದರೆ ಮಾತ್ರ ದೇಶದ ಭವಿಷ್ಯ ಬದಲಾಗುತ್ತದೆ. ಎಲ್ಲರೂ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಶೌಚಾಲಯಗಳನ್ನು ಕಟ್ಟಿಸಿಕೊಂಡು ಬಳಕೆ ಮಾಡುವುದರಿಂದ ರೋಗಗಳಿಂದ ದೂರ ಇರಬಹುದಾಗಿದೆ. ಇತರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೂಡಾ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಜನರನ್ನು ಪ್ರೇರೆಪಿಸಬೇಕು. ಶೌಚಾಲಯ ನಿರ್ಮಿಸಿಕೊಳ್ಳುವುದಕ್ಕೆ ಇರುವ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಗ್ರಾಮಗಳನ್ನು ಬಯಲು ಶೌಚ ಮುಕ್ತಗೊಳಿಸುವುದಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ.ಮುನಿಯಪ್ಪ ಮಾತನಾಡಿ, ಪ್ರತಿಯೊಬ್ಬರಿಗೂ ಉತ್ತಮ ಪರಿಸರ, ಆರೋಗ್ಯ ದೊರೆಯಬೇಕಾದರೆ ಶೌಚಾಲಯದ ಬಳಕೆ ಅಗತ್ಯ. ಇವುಗಳ ನಿರ್ವಹಣೆ ಮತ್ತು ಸ್ವಚ್ಛತೆ ಬಗೆಗೆ ಎಲ್ಲರೂ ಕಾಳಜಿ ವಹಿಸಬೇಕು. ಸ್ಥಳದ ಕೊರತೆಯಿಂದ ಮಹಿಳೆಯರು ಹೆಚ್ಚು ಶೌಚಾಲಯದ ತೊಂದರೆ ಎದುರಿಸುವಂತಾಗಿದೆ. ಹಳ್ಳಿಗಳನ್ನು ಬಯಲು ಬಹಿರ್ದೆಸೆ ಮುಕ್ತ ಹಳ್ಳಿಗಳನ್ನಾಗಿ ಮಾಡಲು ಜನರ ಸಹಕಾರ ಅಗತ್ಯವಾಗಿ ಬೇಕಾಗಿದೆ ಎಂದರು.
ತಾಲ್ಲೂಕು ಪಂಚಾಯಿತಿ ಇಓ ಎಂ.ವೆಂಕಟೇಶ್, ಸದಸ್ಯ ಮುನಿಯಪ್ದ, ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್, ಮುಖಂಡರಾದ ಮುನಿಕೃಷ್ಣಪ್ಪ, ಮುನಿನಾಗಪ್ಪ, ಮುನಿರಾಜು, ದ್ಯಾವಪ್ಪ, ಎಂ.ರಾಮಪ್ಪ, ದಸಂಸ ತಾಲ್ಲೂಕು ಸಂಚಾಲಕ ಎನ್.ಎ.ವೆಂಕಟೇಶ್, ಲಕ್ಷ್ಮೀನಾರಾಯಣ ಹಾಜರಿದ್ದರು.