Home News ಸುಧಾರಣೆಯಾಗದ ತಾಲ್ಲೂಕಿನ ಅರ್ಚಕರ ಮತ್ತು ದೇವಾಲಯಗಳ ಪರಿಸ್ಥಿತಿ

ಸುಧಾರಣೆಯಾಗದ ತಾಲ್ಲೂಕಿನ ಅರ್ಚಕರ ಮತ್ತು ದೇವಾಲಯಗಳ ಪರಿಸ್ಥಿತಿ

0

ಸರ್ಕಾರ ಅರ್ಚಕರು, ಆಗಮಿಕರು, ಉಪಾಧಿವಂತರು ಮತ್ತು ದೇವಾಲಯ ಸಿಬ್ಬಂದಿಗಳ ವೇತನವನ್ನು ಸ್ವಲ್ಪ ಹೆಚ್ಚಿಸಿದೆ. ಆದರೆ ತಾಲ್ಲೂಕಿನಲ್ಲಿನ ಅರ್ಚಕರ ಸ್ಥಿತಿಯಲ್ಲಿ ಸುಧಾರಣೆ ಆಗಿಲ್ಲ, ಅಲ್ಲದೆ ಮುಜರಾಯಿ ದೇವಾಲಯಗಳ ಅಭಿವೃದ್ಧಿಯೂ ನಡೆದಿಲ್ಲ ಎನ್ನುವುದು ಸಾರ್ವಜನಿಕರ ಮಾತು.
ತಾಲ್ಲೂಕಿನಲ್ಲಿ ಒಟ್ಟು 212 ಮುಜರಾಯಿ ದೇವಾಲಯಗಳಿವೆ, 158 ಮಂದಿ ಅರ್ಚಕರಿದ್ದಾರೆ. ತಾಲ್ಲೂಕಿನ ದೇವಾಲಯಗಳೆಲ್ಲವನ್ನೂ ಸಿ ವರ್ಗಕ್ಕೆ ಸೇರಿಸಲಾಗಿದೆ. ಅರ್ಚಕರಲ್ಲದೆ, ತಲಕಾಯಲಬೆಟ್ಟದ ವೆಂಕಟರಮಣಸ್ವಾಮಿಯಂಥಹ ಆದಾಯ ಹೆಚ್ಚಿರುವ ಕೆಲ ದೊಡ್ಡ ದೇವಾಲಯಗಳಲ್ಲಿ ಮಷಾಲ್ತಿ (ಪಂಜು ಹಿಡಿಯುವವರು), ವಾದ್ಯದವರು, ಒಳಾಂಗಣ ಹೊರಾಂಗಣ ನೌಕರರು, ಪಾರುಪತ್ತೆದಾರರು ಮುಂತಾದ ಅವಲಂಬಿತರಿರುತ್ತಾರೆ.
ಸರ್ಕಾರ ಹಿಂದೆ ಅರ್ಚಕರಿಗೆ ತಸ್ತಿಕ್‌ ಹಣವೆಂದು ವಾರ್ಷಿಕವಾಗಿ 36 ಸಾವಿರ ರೂಗಳನ್ನು ನೀಡುತ್ತಿತ್ತು. ಆ ಹಣವನ್ನು ಈಗ 48 ಸಾವಿರ ರೂಗಳಿಗೆ ಏರಿಸಿದೆ. ಈ ತಸ್ತಿಕ್‌ ಹಣವೆಂದರೆ ಅರ್ಚಕರಿಗೆ ಸಂಬಳವಲ್ಲ. ಪೂಜಾಕಾರ್ಯಗಳಿಗೆ ಬಳಸುವ ಪದಾರ್ಥಗಳ ವೆಚ್ಚಕ್ಕೆ ಹಣ. ತೆಂಗಿನಕಾಯಿ, ಹೂ, ಎಣ್ಣೆ ಬತ್ತಿ, ಕಡ್ಡಿ ಕರ್ಪೂರಗಳನ್ನು ಕೊಂಡು ಉಳಿಕೆ ಹಣ ಮಾತ್ರ ಅವರಿಗೆ ಸಲ್ಲುತ್ತದೆ.
ಹಿಂದೆ ದೇವಾಲಯ ಹಾಗೂ ಅರ್ಚಕರ ಸೇವೆಗಾಗಿ ಆದಾಯ ಮೂಲಗಳನ್ನು ದೇವಾಲಯದ ಬಳಿಯಲ್ಲಿಯೇ ಕಲ್ಪಸಿಕೊಡಲಾಗುತ್ತಿತ್ತು. ಆದರೆ ಈಗ ಅರ್ಚಕರಿಗೆ ಭಕ್ತರು ನೀಡುವ ದಕ್ಷಿಣೆ ಹಣ ಮತ್ತು ಸರ್ಕಾರದಿಂದ ಸಿಗುವ ತಸ್ತಿಕ್‌ನ ಉಳಿಕೆ ಹಣ ಮಾತ್ರ ಆದಾಯದ ಮೂಲವಾಗಿದೆ. ಹಾಗಾಗಿ ದೇವರನ್ನು ಪೂಜಿಸುವವರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ.
‘ಬಹುತೇಕ ಮುಜರಾಯಿ ದೇವಸ್ಥಾನಗಳಿಗೆ ಕಾಯಕಲ್ಪದ ಅಗತ್ಯವಿದೆ. ಹಲವೆಡೆಯಂತೂ ದೇವಾಲಯಗಳು ಶಿಥಿಲವಾಗಿ ಪೂಜೆ ಕೂಡ ಮಾಡದಂತಾಗಿವೆ. ದೇವಾಲಯಗಳಲ್ಲಿ ನೀರು, ರಸ್ತೆ ಮುಂತಾದ ಮೂಲ ಸೌಕರ್ಯಗಳ ಅಗತ್ಯವಿದೆ. ಶಿಥಿಲವಾದ ದೇವಾಲಯಗಳನ್ನು ಗುರುತಿಸಿ ಜೀರ್ಣೋದ್ಧಾರ ಮಾಡಬೇಕು. ಅರ್ಚಕರಿಗೆ ದೇವಾಲಯದ ಬಳಿ ವಸತಿ ಸೌಕರ್ಯವನ್ನು ಕಲ್ಪಿಸಬೇಕು. ಸರ್ಕಾರ ತಸ್ತಿಕ್‌ ಹಣವನ್ನು ಹೆಚ್ಚಿಸಿರುವುದು ಸ್ವಾಗತಾರ್ಹವಾದರೂ ಈಗಿನ ಧಾರಣೆಗೆ ಅದು ಸಾಲದು’ ಎನ್ನುತ್ತಾರೆ ತಾಲ್ಲೂಕು ಹಿಂದೂ ದೇವಾಲಯಗಳ ಅರ್ಚಕರ ಆಗಮೀಕರ ಮತ್ತು ಉಪಾಧಿವಂತರ ಒಕ್ಕೂಟದ ಸಹಕಾರ್ಯದರ್ಶಿ ಎಸ್‌.ಸತ್ಯನಾರಾಯಣರಾವ್‌.