Home News ಹುತಾತ್ಮ ಯೋಧನಿಗೆ ಅಶ್ರುತರ್ಪಣೆಯ ಬೀಳ್ಕೊಡುಗೆ

ಹುತಾತ್ಮ ಯೋಧನಿಗೆ ಅಶ್ರುತರ್ಪಣೆಯ ಬೀಳ್ಕೊಡುಗೆ

0

ತಾಲ್ಲೂಕಿನ ಜಂಗಮಕೋಟೆ ಕ್ರಾಸ್‌ನ ಜ್ಞಾನಜ್ಯೋತಿ ಶಾಲೆಯ ಆವರಣಕ್ಕೆ ಶನಿವಾರ ಹುತಾತ್ಮ ಯೋಧ ಗಂಗಾಧರ್‌ ಅವರ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆಯೇ ಬಂಧು ಮಿತ್ರರ ಆಕ್ರಂದನ ಮುಗಿಲುಮುಟ್ಟಿತ್ತು.
ಬುಧವಾರ ರಾತ್ರಿ ಮೃತಪಟ್ಟ ಗಂಗಾಧರ್‌ ಅವರ ಶರೀರ ಸ್ವಗ್ರಾಮಕ್ಕೆ ಬಂದದ್ದು ಶನಿವಾರ. ಸಾವಿನ ಸುದ್ಧಿ ತಿಳಿದ ನಂತರ ದುಃಖದಲ್ಲಿ ಮುಳುಗಿದ್ದ ಕುಟುಂಬದವರು ಹುತಾತ್ಮ ಯೋಧನನ್ನು ಕಂಡೊಡನೆಯೇ ಸಂತೈಸಲಾಗದ ಸ್ಥಿತಿಗೆ ತಲುಪಿದರು. ಕುಸಿದು ಬೀಳುತ್ತಿದ್ದ ಯೋಧ ಗಂಗಾಧರ್‌ ಪತ್ನಿ ಶಿಲ್ಪಾ ಹಾಗೂ ತಾಯಿ ಲಕ್ಷ್ಮಮ್ಮ ಅವರನ್ನು ಬಂಧುಗಳು ಸಂತೈಸುತ್ತಿದ್ದುದನ್ನು ಕಂಡವರೆಲ್ಲಾ ಕಣ್ಣೀರಿಟ್ಟರು.
ಸಾರ್ವಜನಿಕರ ದರ್ಶನಕ್ಕೆ ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ಇಟ್ಟು ಸಾಲಿನಲ್ಲಿ ಹೋಗಿ ದರ್ಶನ ಪಡೆಯುವ ವ್ಯವಸ್ಥೆಯನ್ನು ಪೊಲೀಸರು ಮಾಡಿದ್ದರು.

ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ವೀರಪ್ಪ ಮೊಯ್ಲಿ ಅವರೊಂದಿಗೆ ನೋವು ತೋಡಿಕೊಳ್ಳುತ್ತಿರುವ ಯೋಧನ ತಾಯಿ ಲಕ್ಷ್ಮಮ್ಮ.

ಜ್ಞಾನಜ್ಯೋತಿ ಶಾಲೆಯ ಆವರಣದಲ್ಲಿ ಪೊಲೀಸರು ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಶಾಲೆಯಿಂದ ಯೋಧನ ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ಸ್ವಗ್ರಾಮ ಯಣ್ಣಂಗೂರಿಗೆ ಕರೆದೊಯ್ಯಲಾಯಿತು. ಹುತಾತ್ಮ ಯೋಧನ ಕುಟುಂಬದವರು ಶಾಸ್ತ್ರ ರೀತಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಎಸ್‌ಎಫ್‌ ಸಿಬ್ಬಂದಿ ಸಕಲ ಸರ್ಕಾರಿ ಗೌರವ ಅರ್ಪಿಸಿದರು. ಮೂರು ಸುತ್ತು ಗುಂಡು ಹಾರಿಸಿ ಬಂದೂಕು ತಲೆಕೆಳಗೆ ಮಾಡಿ ಮೌನ ಆಚರಿಸಿದರು. ಅವರ ಮನೆಯ ಮುಂದೆ ಇರುವ ಅವರ ತೋಟದಲ್ಲಿ ಅಂತ್ಯಕ್ರಿಯೆಯನ್ನು ನಡೆಸಲಾಯಿತು.
ವಿದ್ಯಾರ್ಥಿಗಳಿಂದ ಯೋಧನಿಗೆ ನಮನ: ಜಂಗಮಕೋಟೆ ಕ್ರಾಸ್‌ ಹಾಗೂ ಸುತ್ತಮುತ್ತಲಿನ ವಿವಿಧ ಶಾಲೆಗಳಿಂದ ಶಾಲಾ ವಾಹನದಲ್ಲಿ ವಿದ್ಯಾರ್ಥಿಗಳು ಆಗಮಿಸಿ ಯೋಧ ಗಂಗಾಧರ್‌ ಅವರ ಪಾರ್ಥಿವ ಶರೀರಕ್ಕೆ ನಮಿಸಿದರು. ನಡಿಪಿನಾಯಕನಹಳ್ಳಿ ನವೋದಯ ಶಾಲೆ, ಚಿಕ್ಕಜಾಲ ವೆಂಕಟೇಶ್ವರ ಎಂಜಿನಿಯರಿಂಗ್‌ ಕಾಲೇಜು, ನಂದಿನಿ, ಜ್ಯೋತಿ ಶಾಲೆ, ವಿವಿಧ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಯೋಧನ ಅಂತಿಮ ದರ್ಶನ ಪಡೆದರು.
ಗಣ್ಯರಿಂದ ಪುಷ್ಪನಮನ:ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ವೀರಪ್ಪ ಮೊಯ್ಲಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಪಿ.ಎನ್‌.ಕೇಶವರೆಡ್ಡಿ, ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜೆ.ಮಂಜುನಾಥ್‌, ಶಾಸಕ ಎಂ.ರಾಜಣ್ಣ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮುನಿಕೃಷ್ಣಪ್ಪ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಮೇಲೂರು ಬಿ.ಎನ್‌.ರವಿಕುಮಾರ್‌, ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ, ಪೊಲೀಸ್‌ ಎಸ್‌ಪಿ ಕಾರ್ತಿಕ್‌ ರೆಡ್ಡಿ, ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ರೈತ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹುತಾತ್ಮ ಯೋಧನಿಗೆ ಹೂವನ್ನು ಅರ್ಪಿಸಿ ನಮಿಸಿದರು.
ಹುತಾತ್ಮ ಯೋಧನ ಪತ್ನಿ ಮತ್ತು ಮಗನನ್ನು ಸಂತೈಸುತ್ತಿರುವ ಸಂಸದ ವೀರಪ್ಪ ಮೊಯ್ಲಿ

ಯೋಧನ ಕುಟುಂಬದವರ ಆಕ್ರೋಷ: ಹುತಾತ್ಮ ಯೋಧನ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ವೀರಪ್ಪ ಮೊಯ್ಲಿ ಅವರನ್ನು ಪ್ರಶ್ನಿಸಿದ ಯೋಧನ ಪತ್ನಿ ಮತ್ತು ಸಂಬಂಧಿಗಳು ಮೃತ ದೇಹ ಬರಲು ಮೂರು ದಿನಗಳಾಗಿದ್ದಕ್ಕೆ ಆಕ್ರೋಷ ವ್ಯಕ್ತಪಡಿಸಿದರು.
ಹುತಾತ್ಮ ಯೋಧನ ಪಾರ್ಥಿವ ಶರೀರಕ್ಕೆ ನಮಿಸುತ್ತಿರುವ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ

‘ಸ್ವಾಮಿ ಉಸ್ತುವಾರಿ ಸಚಿವರೆ ಕನಿಷ್ಠ ಮಾತಾಡಿ, ಸಮಾಧಾನ ಹೇಳಿ ಹೋಗಿ. ಗಡಿ ಕಾಯುವ ಸೈನಿಕ ಸತ್ತರೆ ಒಂದು ದಿನಕ್ಕೆ ದೇಹವನ್ನು ಕಳಿಸುವ ವ್ಯವಸ್ಥೆ ಮಾಡಿ. ಉದ್ಯಮಿಗಳೊ ಅಥವಾ ರಾಜಕಾರಣಿಗಳಿಗೆ ಈ ರೀತಿ ಆದರೆ ಆದರೆ ನಮ್ಮ ವ್ಯವಸ್ಥೆ ಚುರುಕಾಗಿ ಕೆಲಸ ಮಾಡುತ್ತದೆ. ಆದರೆ ಯೋಧರಿಗೆ ಏಕೆ ನಿರ್ಲಕ್ಷ್ಯ? ಯೋಧ ಮೃತಪಟ್ಟು ಮೂರು್ಕು ದಿನದ ನಂತರ ಪಾರ್ಥಿವ ಶರೀರ ಕಳಿಸಲಾಗಿದೆ. ಇಬ್ಬರು ಗಂಡು ಮಕ್ಕಳನ್ನು ದೇಶ ಸೇವೆಗೆ ಕಳುಹಿಸಿದ್ದಾರೆ. ನಮ್ಮ ನೋವು ಯಾರಿಗೂ ಅರ್ಥವಾಗುವುದಿಲ್ಲ’ ಎಂದು ನೋವಿನಿಂದ ನುಡಿದರು.
ಹುತಾತ್ಮ ಯೋಧನ ಅಂತಿಮ ದರ್ಶನ ಪಡೆಯುತ್ತಿರುವ ಜನತೆ

‘ಇಬ್ಬರು ಮಕ್ಕಳು ಸೈನ್ಯದಲ್ಲಿದ್ದಾರೆ. ಒಬ್ಬ ಹೋಗಿಬಿಟ್ಟ. ಅವನ ಪುಟ್ಟ ಮಗ ಹಾಗೂ ಅವನ ಹೆಂಡತಿಯ ಕಷ್ಟಕ್ಕೆ ಆಗುವವರು ಯಾರು. ಅವರಿಗೆ ಸರ್ಕಾರದಿಂದ ಅನುಕೂಲ ಮಾಡಿಕೊಡಬೇಕು’ ಎಂದು ಯೋಧನ ತಾಯಿ ಲಕ್ಷ್ಮಮ್ಮ ಕೋರಿದರು.
ಲೋಕಸಭೆ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಶ್ನೆ ಮಾಡುವುದಾಗಿ ವೀರಪ್ಪ ಮೊಯ್ಲಿ ಹೇಳಿದರೆ, ಮುಖ್ಯ ಮಂತ್ರಿಗಳಿಗೆ ವಿಷಯವನ್ನು ತಿಳಿಸಿ ಕೇಂದ್ರಕ್ಕೆ ಪತ್ರ ಬರೆಸುವುದಾಗಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

error: Content is protected !!