Home News ಹೊಸಪೇಟೆ ಗ್ರಾಮ ಪಂಚಾಯತಿಯ ಕಚೇರಿ ಆವರಣದಲ್ಲಿ ರಕ್ತದಾನ ಶಿಬಿರ

ಹೊಸಪೇಟೆ ಗ್ರಾಮ ಪಂಚಾಯತಿಯ ಕಚೇರಿ ಆವರಣದಲ್ಲಿ ರಕ್ತದಾನ ಶಿಬಿರ

0

ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುವುದರ ಜೊತೆಗೆ ಆರೋಗ್ಯವಂತ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಹೇಳಿದರು.
ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯ್ತಿಯ ಆವರಣದಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಹೊಸಪೇಟೆ ಗ್ರಾಮ ಪಂಚಾಯತಿ, ಜಂಗಮಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಮನುಷ್ಯನ ದೇಹದಲ್ಲಿ ಪ್ರಕೃತಿದತ್ತವಾಗಿ ಲಭ್ಯವಾಗುವಂತಹ ರಕ್ತಕ್ಕೆ ಪರ್ಯಾಯವಾಗಿ ರಕ್ತವನ್ನು ತಯಾರಿಸಲು ಸಾದ್ಯವಾಗುವುದಿಲ್ಲ, ಮನುಷ್ಯರಿಂದಲೇ ಅದನ್ನು ಪಡೆದುಕೊಳ್ಳುವ ಮೂಲಕ ರಕ್ತದ ಕೊರತೆಯಿಂದಾಗಿ ಸಾವನ್ನಪ್ಪುತ್ತಿರುವಂತಹ ಜನರನ್ನು ಬದುಕಿಸಲು ಸಾಧ್ಯವಾಗುತ್ತದೆ, ರಕ್ತದಾನ ಮಾಡುವುದರಿಂದ ಉತ್ತಮವಾದ ಆರೋಗ್ಯವನ್ನು ಹೊಂದುವುದರ ಜೊತೆಗೆ ಕೊಬ್ಬಿನಾಂಶ ಕಡಿಮೆಯಾಗಲು ಸಹಕಾರಿಯಾಗುತ್ತದೆ, ರಕ್ತದಾನ ಮಾಡುವುದರಲ್ಲಿ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದ್ದು, ಈ ಬಾರಿಯೂ ಕೂಡಾ ಪ್ರಥಮ ಸ್ಥಾನ ಕಾಯ್ದುಕೊಳ್ಳಲು ತಾಲ್ಲೂಕಿನ ಜನತೆ ಸಹಕಾರ ನೀಡಬೇಕು. ರೆಡ್ಕ್ರಾಸ್ ಸಂಸ್ಥೆ ಅಜೀವ ಸದಸ್ಯತ್ವ ಪಡೆಯುವಂತಹ ನಾಗರಿಕರು, ೫೦೦ ರೂಪಾಯಿಗಳ ಸಂದಾಯ ಮಾಡಿ ಸದಸ್ಯತ್ವವನ್ನು ಪಡೆಯಬಹುದಾಗಿರುತ್ತದೆ. ಒಮ್ಮೆ ಸದಸ್ಯತ್ವವನ್ನು ಪಡೆದುಕೊಂಡರೆ, ಪ್ರಪಂಚದಾದ್ಯಂತ ಯಾವುದೇ ಮೂಲೆಯಲ್ಲಿದ್ದರೂ ರಕ್ತದ ಅವಶ್ಯಕತೆಯಿದ್ದಾಗ ರಕ್ತವನ್ನು ಪಡೆದುಕೊಳ್ಳುವಂತಹ ಅವಕಾಶ ದೊರೆಯುತ್ತದೆ ಎಂದರು.
ಮಾಜಿ ಕೋಚಿಮುಲ್ ನಿರ್ದೇಶಕ ಕೆ.ಗುಡಿಯಪ್ಪ, ಜಂಗಮಕೋಟೆ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ಮುನಿಯಪ್ಪ, ರವಿಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೊಗೀಶ್, ಬೈರೇಗೌಡ, ಶಶಿಧರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ರೆಡ್ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎನ್.ಕೆ.ಗುರುರಾಜ್ ಮುಂತಾದವರು ಹಾಜರಿದ್ದರು.