ಯೋಗ ಯಾವುದೇ ಧರ್ಮ, ಪಂಥ ಅಥವಾ ಮತಕ್ಕೆ ಸೀಮಿತವಲ್ಲ. ಅದೊಂದು ಜೀವನ ಪದ್ಧತಿ. ದೇಹ ಮತ್ತು ಮನಸ್ಸು ಆರೋಗ್ಯವಾಗಿರಿಸಿಕೊಳ್ಳಲು ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡುವುದನ್ನು ರೂಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಎಸ್.ಅಜಿತ್ ಕುಮಾರ್ ರೈ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ೫ ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಯೋಗಾಸನ ಪ್ರದರ್ಶನ, ಮತ್ತು ಶೋಭಾಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಗ ಕೇವಲ ದೈಹಿಕ ವ್ಯಾಯಾಮ ಮಾತ್ರವಲ್ಲ, ಶರೀರ, ಬುದ್ಧಿ, ಮನಸ್ಸು ಸಮತೋಲನ ಸಾಧಿಸುವ ಜೀವನ ವಿಧಾನವಾಗಿದೆ. ಹಾಗಾಗಿ ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಯೋಗ ಮಾಡುವುದನ್ನು ರೂಡಿಸಿಕೊಳ್ಳಿ ಎಂದರು.
ಶ್ರೀ ಪತಂಜಲಿ ಯೋಗ ಸಮಿತಿಯ ಸೌಪರ್ಣಿಕಾ ವಲಯ ಸಂಯೋಜಕ ಪಿ.ಶ್ರೀಕಾಂತ್ ಮಾತನಾಡಿ, ವಿಶ್ವದ ನೂರಾರು ರಾಷ್ಟ್ರಗಳಲ್ಲಿ ಇಂದು ‘ವಿಶ್ವ ಯೋಗ ದಿನಾಚರಣೆ’ ನಡೆಸಲಾಗುತ್ತಿರುವುದು ಯೋಗದ ಹಿರಿಮೆಯನ್ನು ತಿಳಿಸುತ್ತದೆ. ಭಾರತೀಯ ಯೋಗ ಪದ್ಧತಿಗೆ ವಿಶ್ವಮಾನ್ಯತೆ ದೊರಕಿರುವುದು ಹೆಮ್ಮೆಯ ಸಂಗತಿ. ಒತ್ತಡ ಬದುಕಿನಿಂದ ಮತ್ತು ಆಧುನಿಕ ಆಹಾರ ಪದ್ಧತಿಯಿಂದಾಗಿ ನಾನಾ ಖಾಯಿಲೆಗಳಿಂದ ಜನರು ಬಳಲುತ್ತಿದ್ದು, ಇದಕ್ಕೆ ಯೋಗ ಪರಿಹಾರವಾಗಲಿದೆ. ದೇಹ ದೇವಾಲಯವಿದ್ದಂತೆ ಅದನ್ನು ಶುದ್ಧಿಯಾಗಿಟ್ಟುಕೊಳ್ಳುವುದೇ ಯೋಗ ಎಂದರು.
ಈ ಸಂದರ್ಭದಲ್ಲಿ ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಆಸನಗಳನ್ನು ಯೋಗಪಟುಗಳು ಮಾಡಿದರು. ಪ್ರಾಣಾಯಾಮ ಸಹ ಯೋಗಾಸನದ ನಂತರ ಮಾಡಲಾಯಿತು. ಮುಖ್ಯ ರಸ್ತೆಯಲ್ಲಿ ಯೋಗ ಪಟುಗಳಿಂದ ಶೋಭಾಯಾತ್ರೆಯನ್ನು ಆಯೋಜಿಸಲಾಗಿತ್ತು. ನಂತರ ಪ್ರಸಾದವನ್ನು ವಿತರಿಸಲಾಯಿತು.