
Sidlaghatta : ಶಿಡ್ಲಘಟ್ಟ ನಗರದ ಹೃದಯಭಾಗದಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದೊಂದಿಗೆ, ಕರ್ನಾಟಕದಲ್ಲಿ ತೋಟಗಾರಿಕೆ ವಿಸ್ತರಣೆಗೆ ಮಹತ್ವದ ಕೊಡುಗೆ ನೀಡಿದ ಡಾ. ಎಂ.ಎಚ್. ಮರಿಗೌಡರ ಸೇವೆಯನ್ನೂ ಸ್ಮರಿಸಬೇಕು ಎಂದು ತೋಟಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿ ಭಕ್ತರಹಳ್ಳಿ ಸಂತೆ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.
In English: As the ₹10-12 crore Dr. B R Ambedkar Bhavan comes up on Horticulture Department land in the heart of Sidlaghatta, a retired department officer has urged that the legacy of Dr. M H Marigowda — the Harvard-trained horticulturist who built the department’s taluk-level infrastructure across Karnataka in the mid-20th century — also be remembered, since this very plot traces back to that expansion effort.
ಸುಮಾರು ₹10–12 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಭವನಕ್ಕೆ ಕಳೆದ ವರ್ಷ ಏ.14ರಂದು ಅಂಬೇಡ್ಕರ್ ಜಯಂತಿಯಂದು ಭೂಮಿಪೂಜೆ ನೆರವೇರಿಸಲಾಗಿತ್ತು. ಮೂರು ದಶಕಗಳ ದಲಿತ ಸಂಘಟನೆಗಳ ಹೋರಾಟದ ಫಲವಾಗಿ ನಗರದ ಹೊರವಲಯದಲ್ಲಿ ಅಲ್ಲದೆ, ನಗರದ ಹೃದಯಭಾಗದಲ್ಲೇ ಭವನ ನಿರ್ಮಾಣಗೊಳ್ಳುತ್ತಿರುವುದು ವಿಶೇಷ.
ಭವಿಷ್ಯದಲ್ಲಿ ಭವನವನ್ನು “ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ”ವಾಗಿ ಅಭಿವೃದ್ಧಿಪಡಿಸುವ ಉದ್ದೇಶವಿದೆ ಎಂದು ಶಾಸಕ ಬಿ.ಎನ್. ರವಿಕುಮಾರ್ ತಿಳಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ, ಡಿಜಿಟಲ್ ಗ್ರಂಥಾಲಯ, ವೃತ್ತಿ ಮಾರ್ಗದರ್ಶನ, ಕೌಶಲ ಅಭಿವೃದ್ಧಿ ಹಾಗೂ ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೇಂದ್ರವನ್ನು ಬಳಸಿಕೊಳ್ಳುವ ಯೋಜನೆಯಿದೆ.
ಮರಿಗೌಡರ ಕೊಡುಗೆ
1951ರಲ್ಲಿ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಡಾ. ಎಂ.ಎಚ್. ಮರಿಗೌಡರು ವೈಯಕ್ತಿಕ ವೃತ್ತಿಜೀವನಕ್ಕೆ ಸೀಮಿತವಾಗದೆ ಕರ್ನಾಟಕಕ್ಕೆ ಮರಳಿ ರೈತರು ಮತ್ತು ತೋಟಗಾರಿಕೆಯ ಅಭಿವೃದ್ಧಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಲಾಲ್ ಬಾಗ್ ನ ಜ್ಞಾನ, ನಾಟಿ ಸಾಮಗ್ರಿ ಮತ್ತು ತಂತ್ರಜ್ಞಾನವನ್ನು ರಾಜ್ಯದ ವಿವಿಧ ಭಾಗಗಳಿಗೆ ತಲುಪಿಸುವ ಉದ್ದೇಶದಿಂದ ತಾಲ್ಲೂಕು ಕೇಂದ್ರಗಳಲ್ಲಿ ತೋಟಗಾರಿಕೆ ಇಲಾಖೆಯ ಕಚೇರಿ, ಕ್ಷೇತ್ರ ಪ್ರಯೋಗಾಲಯ, ಫಾರ್ಮ್ ಹಾಗೂ ನರ್ಸರಿಗಳ ವ್ಯವಸ್ಥೆಗೆ ಅವರು ಕಾರಣರಾದರು.
ಆ ಕಾಲಘಟ್ಟದಲ್ಲಿ ರಾಜ್ಯದ ಪ್ರಮುಖ ಇಲಾಖೆಯಾಗಿದ್ದ ಕೃಷಿ ಇಲಾಖೆಗೆ ಹಲವು ತಾಲ್ಲೂಕುಗಳಲ್ಲಿ ಸ್ವಂತ ಕಟ್ಟಡ ಅಥವಾ ಸೂಕ್ತ ಸರ್ಕಾರಿ ಜಾಗದ ವ್ಯವಸ್ಥೆಯೇ ಇರಲಿಲ್ಲ. ಆದರೆ ತೋಟಗಾರಿಕೆ ಇಲಾಖೆಗೆ ರಾಜ್ಯದ ಬಹುತೇಕ ಎಲ್ಲ ತಾಲ್ಲೂಕುಗಳಲ್ಲೂ ಸ್ವಂತ ಕಚೇರಿ, ಜಾಗ, ಫಾರ್ಮ್ ಹಾಗೂ ನರ್ಸರಿಗಳಂತಹ ಮೂಲಸೌಕರ್ಯ ಕಲ್ಪಿಸುವ ದೂರದೃಷ್ಟಿಯ ಯೋಜನೆ ರೂಪಿಸಿ ಜಾರಿಗೆ ತಂದ ಪ್ರಮುಖರಲ್ಲಿ ಡಾ. ಎಂ.ಎಚ್. ಮರಿಗೌಡರು ಮುಂಚೂಣಿಯಲ್ಲಿದ್ದರು. ತೋಟಗಾರಿಕೆ ಇಲಾಖೆಯ ವಿಸ್ತರಣೆಗೆ ಅವರು ಹಾಕಿಕೊಟ್ಟ ಈ ಮೂಲಸೌಕರ್ಯದ ಅಡಿಪಾಯವೇ ನಂತರ ರಾಜ್ಯದಾದ್ಯಂತ ಇಲಾಖೆಯ ಬಲವರ್ಧನೆಗೆ ನೆರವಾಯಿತು.
ಅವರ ನೇತೃತ್ವದಲ್ಲಿ ರಾಜ್ಯದಾದ್ಯಂತ ನೂರಾರು ಫಾರ್ಮ್ಗಳು ಮತ್ತು ನರ್ಸರಿಗಳು ಅಭಿವೃದ್ಧಿಯಾಗಿದ್ದು, ತೋಟಗಾರಿಕಾ ಇಲಾಖೆಯ ವಿಸ್ತರಣಾ ವ್ಯವಸ್ಥೆಗೆ ಬಲವಾದ ಅಡಿಪಾಯ ನಿರ್ಮಾಣವಾಯಿತು. ಶಿಡ್ಲಘಟ್ಟದಲ್ಲಿರುವ ತೋಟಗಾರಿಕೆ ಇಲಾಖೆಯ ಜಾಗವೂ ಇದೇ ವಿಸ್ತರಣಾ ದೃಷ್ಟಿಕೋನದ ಭಾಗವಾಗಿದೆ ಎಂದು ಸಂತೆ ನಾರಾಯಣಸ್ವಾಮಿ ಹೇಳಿದರು.
“ಇಂದು ಈ ಜಾಗದಲ್ಲಿ ಸಮಾಜಕ್ಕೆ ಉಪಯೋಗವಾಗುವ ಅಂಬೇಡ್ಕರ್ ಭವನ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿ. ಆದರೆ, ಈ ಜಾಗ ಮತ್ತು ಇಂತಹ ತೋಟಗಾರಿಕಾ ಮೂಲಸೌಕರ್ಯ ನಿರ್ಮಾಣದ ಹಿಂದೆ ಮರಿಗೌಡರ ದೂರದೃಷ್ಟಿ ಹಾಗೂ ಸೇವೆಯ ಕೊಡುಗೆಯಿದೆ. ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಅಗತ್ಯ” ಎಂದು ಅವರು ತಿಳಿಸಿದರು.
ಡಾ.ಎಂ.ಎಚ್.ಮರಿಗೌಡರ ದೂರದೃಷ್ಟಿಯ ಕೊಡುಗೆ
ಶಿಡ್ಲಘಟ್ಟದಲ್ಲಿ ತೋಟಗಾರಿಕೆ ಇಲಾಖೆಯ ನರ್ಸರಿ ಆರಂಭಿಸಲು ಒಂದು ಎಕರೆ ಜಾಗ ಗುರುತಿಸಲಾಗಿತ್ತು. ಡಾ. ಎಂ.ಎಚ್. ಮರಿಗೌಡರ ಪ್ರಯತ್ನ ಹಾಗೂ ವಿನ್ಯಾಸ–ಯೋಜನೆಯ ಮಾದರಿಯಲ್ಲಿಯೇ ನರ್ಸರಿ ಜಾಗದ ಮುಂಭಾಗದಲ್ಲಿ ಕಚೇರಿ ಕಟ್ಟಡ ನಿರ್ಮಾಣಗೊಂಡು, 1971ರಲ್ಲಿ ಉದ್ಘಾಟನೆಯಾಯಿತು. ರೈತರಿಗೆ ಉಪಯುಕ್ತವಾಗುವಂತೆ ನರ್ಸರಿ, ಬೀಜಗಳ ಸಂಗ್ರಹಣೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.
ನಂತರ ಅಂದಿನ ಪುರಸಭೆ ಅಧ್ಯಕ್ಷ ನಾರಾಯಣಸ್ವಾಮಿ ಅವರ ಪ್ರಯತ್ನದಿಂದ ನರ್ಸರಿ ಹಿಂಭಾಗದಲ್ಲಿದ್ದ ಮತ್ತೊಂದು ಒಂದು ಎಕರೆ ಸರ್ಕಾರಿ ಜಾಗವನ್ನು ತೋಟಗಾರಿಕೆ ಇಲಾಖೆಗೆ ಸೇರಿಸಿಕೊಳ್ಳಲಾಯಿತು. ಒಟ್ಟು ಎರಡು ಎಕರೆ ಪ್ರದೇಶಕ್ಕೆ ಕಾಂಪೌಂಡ್ ನಿರ್ಮಿಸಿ, ತೋಟಗಾರಿಕೆ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲಾಯಿತು ಎಂದು 1970ರ ದಶಕದಲ್ಲಿ ಶಿಡ್ಲಘಟ್ಟದಲ್ಲಿ ತೋಟಗಾರಿಕೆ ಇಲಾಖೆಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ, ಪ್ರಸ್ತುತ ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ ಯಣ್ಣಂಗೂರು ಶ್ರೀನಿವಾಸ ಆಚಾರ್ ತಿಳಿಸಿದ್ದಾರೆ.