
Sidlaghatta : ಶಿಡ್ಲಘಟ್ಟ ತಾಲ್ಲೂಕು ಕೇಂದ್ರದಲ್ಲಿ ನಿರ್ಮಾಣವಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ಅಧ್ಯಯನ ಕೇಂದ್ರವಾಗಿ ರೂಪಿಸುವ ಚಿಂತನೆಯಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.
In English: MLA B.N. Ravikumar said the under-construction Dr. B.R. Ambedkar Bhavan will be developed into a study centre rather than remain just a building, at a taluk-level Teachers’ Day and Dr. S. Radhakrishnan birth anniversary event at Handiganala’s KV Bhavan, where he also set a target for Sidlaghatta to top the district in this year’s SSLC results.
ತಾಲ್ಲೂಕಿನ ಹಂಡಿಗನಾಳದ ಕೆ.ವಿ. ಭವನದಲ್ಲಿ ಭಾನುವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಭಾರತ ರತ್ನ ಡಾ.ಎಸ್.ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ದೇಶ ಹಾಗೂ ನಾಡಿನ ನಿರ್ಮಾಣಕ್ಕೆ ಶ್ರಮಿಸಿದ ಮತ್ತು ಹುತಾತ್ಮರಾದ ಮಹನೀಯರ ಜೀವನ, ಆದರ್ಶ ಹಾಗೂ ತತ್ವಗಳನ್ನು ಯುವಜನರು ಅರಿತುಕೊಂಡು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಈ ಉದ್ದೇಶದಿಂದ ಅಂಬೇಡ್ಕರ್ ಭವನವನ್ನು ಕೇವಲ ಭವನವಾಗಿ ಉಳಿಸದೆ, ಅಧ್ಯಯನ ಕೇಂದ್ರವನ್ನಾಗಿ ರೂಪಿಸುವ ಆಲೋಚನೆಯಿದೆ” ಎಂದರು.
“ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಅವರು ನಮ್ಮ ಕ್ಷೇತ್ರದವರಾಗಿದ್ದು, ಈ ಕುರಿತು ಅವರೊಂದಿಗೆ ಈಗಾಗಲೇ ಚರ್ಚಿಸಿ ಮನವಿ ಮಾಡಿದ್ದೇನೆ. ಅಧ್ಯಯನ ಕೇಂದ್ರ ನಿರ್ಮಾಣವಾದರೆ ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಹೆಚ್ಚಿನ ಅನುಕೂಲವಾಗಲಿದೆ” ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರಿ ನೌಕರರ ಭವನದ ಎರಡು ಅಂತಸ್ತಿನ ಕಟ್ಟಡ ಕಾಮಗಾರಿ ಅಂತಿಮ ಹಂತ ತಲುಪಿದೆ. ಗುರುಭವನದ ನಿರ್ಮಾಣ ಕಾರ್ಯವೂ ಭರದಿಂದ ಸಾಗುತ್ತಿದೆ. ಈ ಕಟ್ಟಡಗಳು ಕ್ಷೇತ್ರದ ಜನತೆಗೆ ಅರ್ಪಣೆಯಾಗಲಿದ್ದು, ಅಭಿವೃದ್ಧಿ, ಪ್ರಗತಿ ಹಾಗೂ ಸೌಹಾರ್ದತೆಗೆ ಪೂರಕವಾಗಲಿವೆ ಎಂದು ಆಶಿಸಿದರು.
“ಸಾಧಾರಣ ರೈತ ಕುಟುಂಬದಿಂದ ಬಂದ ನನ್ನನ್ನು ಕ್ಷೇತ್ರದ ಜನರು ಶಾಸಕನನ್ನಾಗಿ ಮಾಡಿದ್ದಾರೆ. ನಿಮ್ಮ ಋಣವನ್ನು ಜೀವನಪೂರ್ತಿ ತೀರಿಸಲು ಸಾಧ್ಯವಿಲ್ಲ. ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸೇವೆಯ ಮೂಲಕ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ” ಎಂದರು.
ಎಸ್.ಎಸ್.ಎಲ್.ಸಿ ಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗುರಿ:
“2026–27ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಶಿಡ್ಲಘಟ್ಟ ತಾಲ್ಲೂಕು ಪ್ರಥಮ ಸ್ಥಾನ ಪಡೆಯುವಂತೆ ಫಲಿತಾಂಶ ನೀಡಲು ಶಿಕ್ಷಕರು ಪ್ರಾಮಾಣಿಕವಾಗಿ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬೇಕು. ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡಲು ನಾನು ಸಿದ್ಧ” ಎಂದು ಹೇಳಿದರು.
“ವರ್ಷಪೂರ್ತಿ ಮಕ್ಕಳ ಶ್ರೇಯಸ್ಸಿಗಾಗಿ ಶಿಕ್ಷಕರು ಶ್ರಮಿಸುತ್ತಾರೆ. ಶಿಕ್ಷಕರ ದಿನಾಚರಣೆಯ ಮೂಲಕ ಅವರ ಸೇವೆಯನ್ನು ಗೌರವಿಸುವ ಅವಕಾಶ ನನಗೆ ದೊರೆತಿರುವುದು ಸೌಭಾಗ್ಯ. ಸಮಾಜ ಸರಿದಾರಿಯಲ್ಲಿ ಸಾಗಬೇಕಾದರೆ ಶಿಕ್ಷಕರು ಮಕ್ಕಳನ್ನು ಸನ್ನಡತೆಯ ಹಾದಿಯಲ್ಲಿ ಮುನ್ನಡೆಸಬೇಕು” ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಡಾ.ಎಸ್.ರಾಧಾಕೃಷ್ಣನ್ ಅವರ ಭಾವಚಿತ್ರ ಅನಾವರಣಗೊಳಿಸಲಾಯಿತು. ಈ ಶೈಕ್ಷಣಿಕ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಯಿತು.
ತಹಶೀಲ್ದಾರ್ ಗಗನಸಿಂಧು, ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ, ನಗರಸಭೆ ಪೌರಾಯುಕ್ತೆ ಅಮೃತ, ಬಿಇಒ ಸ್ವಾಮಿ, ಚಿಮುಲ್ ನಿರ್ದೇಶಕರಾದ ಬಂಕ್ ಮುನಿಯಪ್ಪ, ಹುಜುಗೂರು ರಾಮಣ್ಣ, ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಎನ್.ಸುಬ್ಬಾರೆಡ್ಡಿ, ಪೂಲಕುಂಟಹಳ್ಳಿ ರಘುನಾಥರೆಡ್ಡಿ, ಲಕ್ಷ್ಮೀನಾರಾಯಣರೆಡ್ಡಿ, ಸುಂದರಾಚಾರಿ, ವೆಂಕಟರೆಡ್ಡಿ, ಸರಸ್ವತಮ್ಮ, ದೇವರಾಜ್, ಸುಮ, ಕೆ.ಮಂಜುನಾಥ್, ಇಸಿಒ ಮಂಜುನಾಥ್, ಲೀಲಾ ಇದ್ದರು.