ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸಿ.ಐ.ಟಿ.ಯು ಸಂಘಟನೆಯ ನೇತೃತ್ವದಲ್ಲಿ ಅಂಗನವಾಡಿ ನೌಕರರು ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯ ಮುಂದೆ ಸೋಮವಾರ ಪ್ರತಿಭಟನೆಯನ್ನು ನಡೆಸಿದರು.
ಅಂಗನವಾಡಿ ಕೇಂದ್ರಗಳಿಗೆ ಮತ್ತು ಅಂಗನವಾಡಿ ನೌಕರರಿಗೆ ಕೊರೊನಾ ಸಂರಕ್ಷಣೆಯನ್ನು ಒದಗಿಸಿ. ಮಾಸ್ಕ್, ಗ್ಲೌಸ್, ಫೇಸ್ ಶೀಲ್ಡ್ ಮತ್ತು ಸ್ಯಾನಿಟೈಸರ್ ಇತ್ಯಾದಿ ಸಂರಕ್ಷಣಾ ಸಾಮಗ್ರಿಗಳನ್ನು ನೀಡಬೇಕು. ವಿಮೆ ಸೌಲಭ್ಯವನ್ನು ಒದಗಿಸಬೇಕು. ಕೊರೊನಾ ಸಂದರ್ಭದಲ್ಲಿ ದುಡಿಯುತ್ತಿರುವ ಅಂಗನವಾಡಿ ನೌಕರರಿಗೆ 25 ಸಾವಿರ ರೂ ಪ್ರೋತ್ಸಾಹಧನ ಮತ್ತು ಸ್ಥಳೀಯ ಸಾರಿಗೆ ಬಸ್ ಪಾಸ್ ಮತ್ತು ಊಟದ ವೆಚ್ಚವನ್ನು ಭರಿಸಬೇಕು. ಈಗಿರುವ ಎನ್.ಪಿ.ಎಸ್ ಲೈಟ್ ಅನ್ನು ಬದಲಿಸಿ ಎಲ್.ಐ.ಸಿ ಆಧಾರಿತ ನಿವೃತ್ತಿ ವೇತನ ನೀಡಬೇಕು. ಐ.ಸಿ.ಡಿ.ಎಸ್ ಯೋಜನೆಗೆ ಅನುದಾನವನ್ನು ಹೆಚ್ಚಳ ಮಾಡಿ ಎಂಬ ಹತ್ತು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟಿಸಿದರು.
ನಮ್ಮ ಸಮಸ್ಯೆಗಳು ಬಗೆಹರಿಯದಿದ್ದಲ್ಲಿ ಆಹಸ್ಟ್ ತಿಂಗಳಿನಿಂದ ಅಸಹಕಾರ ಚಳುವಳಿ ನಡೆಸುವುದಾಗಿ ಎಚ್ಚರಿಕೆ ನೀಡಿ, ಎ.ಸಿ.ಡಿ.ಪಿ.ಒ ಮಹೇಶ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಸಿ.ಐ.ಟಿ.ಯು ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀದೇವಮ್ಮ, ತಾಲ್ಲೂಕು ಅಧ್ಯಕ್ಷೆ ಅಶ್ವತ್ಥಮ್ಮ, ನಂದಿನಿ, ಗಾಯಿತ್ರಿ, ಗೌರಮ್ಮ, ಮುನಿರತ್ನ, ಗಂಗ, ಶಾಂತಮ್ಮ ಹಾಜರಿದ್ದರು.