Sidlaghatta : ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ. ವಿದ್ಯಾಸಂಸ್ಥೆಯಲ್ಲಿ ಭಾನುವಾರ ಶಿಕ್ಷಣತಜ್ಞ ಹಾಗೂ ಗೌರವ ಡಾಕ್ಟರೇಟ್ ಪುರಸ್ಕೃತ ಡಾ. ಟಿ.ಕೆ. ನಾರಾಯಣಪ್ಪ ಅವರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಉಪ ಲೋಕಾಯುಕ್ತ ಜಸ್ಟಿಸ್ ಬಿ.ವೀರಪ್ಪ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಆದರ್ಶ ಪ್ರಜೆಗಳಾಗಿ ರೂಪುಗೊಂಡಾಗ ಮಾತ್ರ ಅವರಿಗೆ ಶಿಕ್ಷಣ ನೀಡಿದ ವಿದ್ಯಾಸಂಸ್ಥೆ ಹಾಗೂ ಶಿಕ್ಷಕರಿಗೆ ನಿಜವಾದ ಸಾರ್ಥಕತೆ ದೊರೆಯುತ್ತದೆ ಎಂದರು.
“ಜೀವನದಲ್ಲಿ ಎಷ್ಟೇ ಸಾಧನೆ ಮಾಡಿದರೂ ಪ್ರಾಮಾಣಿಕತೆ ಇಲ್ಲದಿದ್ದರೆ ಆ ಸಾಧನೆಗೆ ಯಾವುದೇ ಮೌಲ್ಯ ಇರುವುದಿಲ್ಲ. ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಪ್ರಾಮಾಣಿಕ ಹಾಗೂ ನ್ಯಾಯಬದ್ಧ ಜೀವನ ನಡೆಸಬೇಕು. ಲಕ್ಷದಲ್ಲಿ ಒಬ್ಬರಾಗುವಂತಹ ಸಾಧನೆ ಮಾಡಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
“ಹೆಣ್ಣುಮಕ್ಕಳು ಯಾವುದೇ ಕ್ಷೇತ್ರದಲ್ಲೂ ಯಾರಿಗೂ ಕಡಿಮೆಯಿಲ್ಲ. ಎಲ್ಲರೂ ಶಿಸ್ತಿನ ಸಿಪಾಯಿಗಳಾಗಿ, ಜಗತ್ತು ಮೆಚ್ಚುವ ರೀತಿಯಲ್ಲಿ ಕಾಯ, ವಾಚಾ, ಮನಸಾ ಬದುಕಬೇಕು. ದುಷ್ಟ ವ್ಯಕ್ತಿಗಳಾಗಿ ಬದುಕುವುದಕ್ಕಿಂತ ಸಾಯುವುದೇ ಮೇಲು” ಎಂದರು.
“ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟ ಗುರಿ (ಬ್ಲೂಪ್ರಿಂಟ್) ಇರಬೇಕು. ಸಂಕಲ್ಪ, ತ್ಯಾಗ ಮತ್ತು ದೃಢನಿರ್ಧಾರ ಇದ್ದರೆ ಯಶಸ್ಸು ಸಾಧ್ಯ. ತಂದೆ–ತಾಯಿ, ಗುರುಗಳು ಹಾಗೂ ಹಿರಿಯರನ್ನು ಗೌರವಿಸಬೇಕು. ನನ್ನ ಸಾಧನೆಗೆ ನನ್ನ ಗುರುಗಳು ಹಾಗೂ ತಂದೆ–ತಾಯಿ ನೀಡಿದ ಸಂಸ್ಕಾರವೇ ಕಾರಣ. ಎಷ್ಟೇ ಎತ್ತರಕ್ಕೆ ಬೆಳೆದರೂ ತಮ್ಮ ತಳಹದಿಯನ್ನು ಮರೆಯಬಾರದು” ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಗಗನಸಿಂಧು ಮಾತನಾಡಿ, ವಿದ್ಯಾರ್ಥಿಗಳು ಗುರಿ ನಿಗದಿಪಡಿಸಿಕೊಂಡು ಶ್ರಮಿಸಿದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ಪ್ರೇರಣಾದಾಯಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಈ ಕೆಳಗಿನವರು ಭಾಗವಹಿಸಿದ್ದರು:
- ಕೃಷಿ ವಿಶ್ವವಿದ್ಯಾಲಯದ ನಿವೃತ್ತ ವಿಸ್ತರಣಾ ನಿರ್ದೇಶಕ ಪ್ರೊ. ವಿ. ವೀರಭದ್ರಯ್ಯ
- ಬಿ.ಎಂ.ವಿ. ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ವಿ. ಮುನೇಗೌಡ, ಕಾರ್ಯದರ್ಶಿ ಎಲ್. ಕಾಳಪ್ಪ
- ನಿವೃತ್ತ ತೋಟಗಾರಿಕೆ ಅಧಿಕಾರಿ ಎಸ್. ನಾರಾಯಣಸ್ವಾಮಿ
- ನಿವೃತ್ತ ಡಿ.ವೈ.ಎಸ್.ಪಿ. ಬಿ.ವಿ. ರಾಮಚಂದ್ರಪ್ಪ
- ಬೆಂಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಹಡಪದ್
- ವಕೀಲ ಎನ್. ಜಯರಾಂ
- ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಮಳ್ಳೂರು ಶಿವಣ್ಣ
- ಡಾ. ರವಿಕಲಾ ಕಾಳಪ್ಪ, ಡಾ. ಅರವಿಂದ್
In English: Deputy Lokayukta Justice B. Veerappa felicitated educationist Dr. T.K. Narayanappa at a program held at BMV Vidyasamsthe, Bhaktarahalli, on Sunday. He urged students to pursue honesty and justice alongside academic success, while Tahsildar Gaganasindhu also addressed the gathering with motivational remarks.








