Home News ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ಒದಗಿಸುವುದೇ ಜಿಲ್ಲಾಡಳಿತದ ಪ್ರಮುಖ ಉದ್ದೇಶ – ಜಿಲ್ಲಾಧಿಕಾರಿ ಜಿ. ಪ್ರಭು

ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ಒದಗಿಸುವುದೇ ಜಿಲ್ಲಾಡಳಿತದ ಪ್ರಮುಖ ಉದ್ದೇಶ – ಜಿಲ್ಲಾಧಿಕಾರಿ ಜಿ. ಪ್ರಭು

0
Chikkaballapur DC G Prabhu Visit Sidlaghatta Taluk Office

Sidlaghatta : ಜಿಲ್ಲಾಧಿಕಾರಿ ಜಿ. ಪ್ರಭು ಅವರು ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಷೇತ್ರ ಭೇಟಿಗಾಗಿ ಆದ್ಯತೆ ನೀಡಿ ಜನಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವತ್ತ ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಪ್ರತಿ ತಾಲ್ಲೂಕುಗಳಿಗೆ ನಿಯಮಿತವಾಗಿ ಭೇಟಿ ನೀಡಿ ಆಡಳಿತ ವ್ಯವಸ್ಥೆ ಸುಧಾರಣೆ, ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ಒದಗಿಸುವುದೇ ಪ್ರಮುಖ ಉದ್ದೇಶವಾಗಿದೆ. ವಾರಕ್ಕೆ ಕನಿಷ್ಠ ಎರಡು ರಿಂದ ಮೂರು ದಿನ ಸ್ಥಳ ಪರಿಶೀಲನೆ ನಡೆಸಲಾಗುತ್ತಿದ್ದು, ದೀರ್ಘಕಾಲದಿಂದ ಬಾಕಿ ಉಳಿದ ಯೋಜನೆಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ದರಖಾಸ್ತು ಪೊಡಿ, ಸರ್ವೇ ಸಂಖ್ಯೆ ಸೃಷ್ಟಿ ಮತ್ತು ಕಂದಾಯ ದಾಖಲೆ ವಿತರಣೆ ಕಾರ್ಯ ವೇಗ ಪಡೆದುಕೊಂಡಿದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲೂ ಸಾವಿರಾರು ಅರ್ಜಿಗಳಿಗೆ ಮಂಜೂರಾತಿ ದೊರೆತಿದ್ದು, ಶೀಘ್ರದಲ್ಲೇ ಎಲ್ಲ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ನಡೆಯಲಿದೆ ಎಂದು ತಿಳಿಸಿದರು.

ಜಂಟಿ ಖಾತೆ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲಾಗುತ್ತಿದ್ದು, ಕುಟುಂಬ ಸದಸ್ಯರ ಒಪ್ಪಿಗೆ ಆಧಾರದ ಮೇಲೆ ಖಾತೆ ಹಂಚಿಕೆ ಪ್ರಕ್ರಿಯೆ ಕೈಗೊಳ್ಳಲಾಗಿದೆ. “ಇ-ಆಫೀಸ್” ವ್ಯವಸ್ಥೆ ಮೂಲಕ ಅರ್ಜಿಗಳ ಮೇಲ್ವಿಚಾರಣೆ ಸುಗಮವಾಗಿದ್ದು, ಸಾರ್ವಜನಿಕರು ಕಚೇರಿಯ ಸ್ವೀಕೃತಿ ವಿಭಾಗದಲ್ಲಿ ಅರ್ಜಿ ಸಲ್ಲಿಸಲು ಮನವಿ ಮಾಡಿದರು.

ತಾಲ್ಲೂಕಿನಲ್ಲಿ ದರಖಾಸ್ತು ಪೊಡಿಗೆ ಸಂಬಂಧಿಸಿದಂತೆ ಸುಮಾರು 6,500 ರಿಂದ 7,000 ಅರ್ಜಿಗಳು ಬಾಕಿ ಇವೆ. ಈ ಮಂಜೂರಿದಾರರಿಗೆ ಹೊಸ ಸರ್ವೇ ನಂಬರ್ ನೀಡಿ, ವಿಸ್ತೀರ್ಣಕ್ಕೆ ಅನುಗುಣವಾಗಿ ಹೊಸ ಆರ್‌.ಟಿ.ಸಿ ಕೊಡುವಂತಹ ಕೆಲಸ ಮಾಡಲಾಗುವುದು. ಈಗಾಗಲೇ ಜಿಲ್ಲೆಯಾದ್ಯಂತ ಸುಮಾರು 25,000 ನಾಗರಿಕರಿಗೆ ಶಾಶ್ವತ ದಾಖಲೆಗಳನ್ನು ನೀಡಲಾಗಿದ್ದು, ಶಿಡ್ಲಘಟ್ಟದಲ್ಲೂ ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಹೇಳಿದರು.

ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸಲು ದಾಖಲೆಗಳ ಡಿಜಿಟಲೀಕರಣ ಕಾರ್ಯ ಚುರುಕುಗೊಂಡಿದೆ. ತಾಲೂಕಿನ 4,300 ಮಂಜೂರಾತಿ ಕಡತಗಳ ಪೈಕಿ 3,300 ಕಡತಗಳು ಸ್ಕ್ಯಾನಿಂಗ್ ಆಗಿದ್ದು, ಪರಿಶೀಲನೆ ನಂತರ ಸಾರ್ವಜನಿಕರಿಗೆ ಆನ್‌ ಲೈನ್ ಮೂಲಕ ಲಭ್ಯವಾಗಲಿದೆ.

ಕಂದಾಯ ಗ್ರಾಮಗಳಲ್ಲಿ ದೀರ್ಘಕಾಲದಿಂದ ವಾಸಿಸುತ್ತಿರುವ ಸುಮಾರು 80,000 ಕುಟುಂಬಗಳಿಗೆ ಮಾಲೀಕತ್ವ ಹಕ್ಕು ನೀಡುವ ಯೋಜನೆ ಜಾರಿಯಲ್ಲಿದೆ. ತಾತಹಳ್ಳಿ, ಹಂಡಿಗನಾಳ ಹಾಗೂ ಹನುಮಂತಪುರ ಗ್ರಾಮಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಶೀಘ್ರದಲ್ಲೇ ವೈಜ್ಞಾನಿಕ ಸರ್ವೆ ಆರಂಭವಾಗಲಿದೆ. ಮುಂದಿನ ಎಂಟು ತಿಂಗಳಿಂದ ಒಂದು ವರ್ಷದೊಳಗೆ ಮನೆ ಬಾಗಿಲಿಗೆ ಹಕ್ಕುಪತ್ರ ವಿತರಣೆ ಮಾಡುವುದಾಗಿ ಭರವಸೆ ನೀಡಿದರು.

ನಗರದಲ್ಲಿ ಸ್ವಚ್ಛತೆ, ಈ-ಸ್ವತ್ತು ಅಭಿಯಾನ ಮತ್ತು ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಅಗತ್ಯ ಸ್ಥಳಗಳನ್ನು ಗುರುತಿಸಿ ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುತ್ತದೆ. ಮನೆಮನೆಗೆ ಈ-ಸ್ವತ್ತು ಅಭಿಯಾನ ನಡೆಸಿ ಹೆಚ್ಚಿನ ಸಂಖ್ಯೆಯ ಜನರಿಗೆ ಈ ಸ್ವತ್ತುಪತ್ರ ನೀಡುವ ಗುರಿ ಹೊಂದಲಾಗಿದೆ ಎಂದರು.

ಜಂಗಮಕೋಟೆ ಪ್ರದೇಶದ ಭೂಸ್ವಾಧೀನ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದಿರುವುದಾಗಿ ತಿಳಿಸಿದ ಅವರು, ಕೈಗಾರಿಕಾ ಅಭಿವೃದ್ಧಿ ಹಾಗೂ ರೈತರ ಹಿತದ ನಡುವೆ ಸಮತೋಲನ ಸಾಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವುದು ಆಡಳಿತದ ಪ್ರಮುಖ ಗುರಿಯಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಪ್ರಭು ಹೇಳಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಗಗನ ಸಿಂಧು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹೇಮಾವತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version