Home News ಕಾಲೇಜು ಪುನರಾರಂಭ; ವಿದ್ಯಾರ್ಥಿಗಳ ಗಂಟಲುದ್ರವ ಪರೀಕ್ಷೆ

ಕಾಲೇಜು ಪುನರಾರಂಭ; ವಿದ್ಯಾರ್ಥಿಗಳ ಗಂಟಲುದ್ರವ ಪರೀಕ್ಷೆ

0

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರ್ಕಾರಿ ಆಸ್ಪತ್ರೆಯ ವತಿಯಿಂದ ನಡೆಸಲಾಗುತ್ತಿದ್ದ ಸ್ವಾಬ್ ಪರೀಕ್ಷೆಯನ್ನು ಪರಿಶೀಲಿಸಿ ತಹಶೀಲ್ದಾರ್ ಕೆ.ಅರುಂಧತಿ ಮಾತನಾಡಿದರು.

ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ಈ ದಿನ ಕಾಲೇಜಿಗೆ ಆಗಮಿಸುತ್ತಿದ್ದು, ಪ್ರತಿಯೊಬ್ಬರ ಗಂಟಲುದ್ರವ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

 ತಾಲ್ಲೂಕಿನಲ್ಲಿ ಕೊರೊನಾ ಹಾವಳಿ ತಗ್ಗಿರುವಂತೆಯೇ ಕಾಲೇಜು ಪುನರಾರಂಭಗೊಳ್ಳುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಬೋಧಕರು ಹಾಗೂ ಸಿಬ್ಬಂದಿಗಳಿಗೆ ಮೂರು ದಿನ ಮೊದಲೇ ಕೋವಿಡ್ ಪರೀಕ್ಷೆ ಮಾಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಈ ದಿನ ಪರೀಕ್ಷೆ ಮಾಡಿಸಲಾಗುತ್ತಿದೆ. ಕಾಲೇಜಿನ ಕಟ್ಟಡ, ಶೌಚಾಲಯ, ಎಲ್ಲ ಕೊಠಡಿಗಳಲ್ಲಿನ ಪೀಠೋಪಕರಣ ಮತ್ತು ಪಠ್ಯ ಸಾಮಗ್ರಿಗಳನ್ನು ಸ್ಯಾನಿಟೈಸ್ ಮಾಡಿಸಲಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದೇವೆ. ಒಂದು ಬೆಂಚಿಗೆ ಇಬ್ಬರು ವಿದ್ಯಾರ್ಥಿಗಳು ಮಾತ್ರ ಕೂರುವಂತೆ ವ್ಯವಸ್ಥೆ ಮಾಡಿದ್ದೇವೆ. ನಗರದ ಡಾಲ್ಫಿನ್ ಕಾಲೇಜನ್ನು ಶುಕ್ರವಾರದಿಂದ ಪ್ರಾರಂಭಿಸಲಿದ್ದು, ಅಲ್ಲಿನ ಉಪನ್ಯಾಸಕರು ಮತ್ತು ಸಿಬ್ಬಂದಿಗೆ ಈ ದಿನ ಸ್ವಾಬ್ ಪರೀಕ್ಷೆ ಮಾಡಿಸಿದ್ದೇವೆ ಎಂದರು.

 ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಆಂಡ್ರಾಯಿಡ್ ಫೋನ್ ಹೊಂದಿರುವ ಪ್ರತಿಯೊಬ್ಬರೂ ಆರೋಗ್ಯ ಸೇತು ಆಪ್ ಡೌನ್ ಕಡ್ಡಾಯವಾಗಿ ಲೋಡ್ ಮಾಡಿಕೊಳ್ಳಲೇಬೇಕು. ಇದರಿಂದಾಗಿ ಅವರ ಹತ್ತಿರ ಪಾಸಿಟೀವ್ ಇದ್ದವರು ಬಂದಾಗ ಮಾಹಿತಿ ತಿಳಿಯುತ್ತದೆ ಎಂದು ನುಡಿದರು.

ಶಿಡ್ಲಘಟ್ಟ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿ 118 ವಿದ್ಯಾರ್ಥಿಗಳಿದ್ದಾರೆ. ಕಾಲೇಜು ಪುನರಾರಂಭಗೊಂಡ ಮೊದಲ ದಿನವಾದ ಮಂಗಳವಾರ ಹಾಜರಾಗಿದ್ದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 20.