Home News ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರ ಮನವಿ

ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರ ಮನವಿ

0

ಸಮಾನ ವೇತನ ಮತ್ತು ಸೇವಾ ಭದ್ರತೆ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಕಳೆದ 14 ದಿನಗಳಿಂದ ಶಾಂತಿಯುತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಈವರೆಗೂ ಸಂಬಂದಪಟ್ಟ ಇಲಾಖೆ ಅಥವ ಸರ್ಕಾರದಿಂದ ಯಾವುದೇ ಭರವಸೆ ಸಿಕ್ಕಿಲ್ಲ ಎಂದು ನಗರ ಆರೋಗ್ಯ ಕೇಂದ್ರದ ವೈದ್ಯ ಡಾ.ಗುರು ಹೇಳಿದರು.

 ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರು ಮಂಗಳವಾರ ನಗರದ ಸಾರ್ವಜನಿಕ ಆಸ್ಪತ್ರೆಯಿಂದ ತಾಲ್ಲೂಕು ಕಚೇರಿಯವರೆಗೂ ಏರ್ಪಡಿಸಲಾಗಿದ್ದ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿ ಮಾತನಾಡಿದರು.

 

 ಕಳೆದ 2019 ರ ಫೆಬ್ರುವರಿಯಿಂದ ನಾವುಗಳು ಪ್ರತಿಭಟನೆ ನಡೆಸಿ ನಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೆವು. ಆದರೆ ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸಲಿಲ್ಲ. ಕಳೆದ ಜೂನ್ ತಿಂಗಳಿನಲ್ಲಿ ನಾವು ಪ್ರತಿಭಟನೆಗೆ ಮುಂದಾದಾಗ, ಸರ್ಕಾರ ಸಮಿತಿಯೊಂದನ್ನು ರಚಿಸುವುದಾಗಿ ಭರವಸೆ ನೀಡಿದ್ದರು. ಮೂರು ತಿಂಗಳಾದರೂ ನಮಗೆ ಸಮಾನ ವೇತನ ಮತ್ತು ಸೇವಾ ಭದ್ರತೆ ನೀಡಿಲ್ಲ.

 ಸುಮಾರು 10-15 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಜೊತೆಗೆ ಕಳೆದ ಏಳು ತಿಂಗಳುಗಳಿಂದ ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟಲು ನಮ್ಮ ಜೀವವನ್ನೇ ಮುಡಿಪಾಗಿಟ್ಟಿದ್ದೇವೆ. ಇಷ್ಟಾದರೂ ಈವರೆಗೂ ನಮಗೆ ಸಮಾನ ವೇತನ ಸೇರಿದಂತೆ ಸೇವಾ ಭದ್ರತೆ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸಾಲದ್ದಕ್ಕೆ ಹೊರಗುತ್ತಿಗೆ ಸಂಸ್ಥೆಯವರು ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸುವ ಬೆದರಿಕೆ ಹಾಕುತ್ತಿರುವುದರಿಂದ ಮತ್ತಷ್ಟು ಹಿಂಸೆಗೊಳಗಾಗಿದ್ದೇವೆ.

ಹಾಗಾಗಿ ಸರ್ಕಾರ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲವಾದಲ್ಲಿ ರಾಜ್ಯಾಧ್ಯಂತ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಒತ್ತಾಯಿಸಿ ಶಿರಸ್ತೇದಾರ್ ಕೆ.ಎನ್.ಮಂಜುನಾಥ್‌ರ ಮೂಲಕ ತಹಶೀಲ್ದಾರ್‌ರಿಗೆ ಮನವಿ ಪತ್ರ ಸಲ್ಲಿಸಿದರು.

 ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರಾದ ಶ್ರೀನಿವಾಸ್, ಮಂಜುನಾಥ್, ಕೀರ್ತಿ, ಮಂಗಳಾ, ಸುನೀತ, ಪ್ರತಿಭ, ಕವಿತ, ಸರಿತ, ಶೃತಿ, ಮಮತ.ಕೆ.ಎಸ್, ನಾಗಮಣಿ, ವಿಜಯಾ, ಮಮತಾ, ಚೈತ್ರಾ, ಭಾಗ್ಯಮ್ಮ ಹಾಜರಿದ್ದರು.

error: Content is protected !!