ಪೂರ್ಣ ಪುಟ · Open full page
News

ಸಾಲ ವಸೂಲಾತಿ ಕೊರತೆಯಿಂದ ₹8 ಕೋಟಿ ನಷ್ಟದಲ್ಲಿ ಸಹಕಾರಿ ಕೃಷಿ ಬ್ಯಾಂಕ್

PLD Bank 88th annual general meeting lamp lighting ceremony, Sidlaghatta

Sidlaghatta : ರೈತರು ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡದಿರುವುದರಿಂದ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿ.ಎಲ್.ಡಿ ಬ್ಯಾಂಕ್) ಸುಮಾರು ₹8 ಕೋಟಿ ನಷ್ಟದಲ್ಲಿದೆ ಎಂದು ಬ್ಯಾಂಕಿನ ಮಾಜಿ ಅಧ್ಯಕ್ಷ ಹಾಗೂ ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಹೇಳಿದರು.

ನಗರದ ಪಿ.ಎಲ್.ಡಿ ಬ್ಯಾಂಕ್ ಆವರಣದಲ್ಲಿ ಶನಿವಾರ ನಡೆದ 2025–26ನೇ ಸಾಲಿನ 88ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

“ಕಳೆದ ಮೂರು ವರ್ಷಗಳಿಂದ ರೈತರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸಾಲ ನೀಡಲು ಸಾಧ್ಯವಾಗುತ್ತಿಲ್ಲ. ಸಾಲದ ವಸೂಲಾತಿ ಪ್ರಮಾಣ ಶೇ 50ರಷ್ಟಿದ್ದು, ಶೇ 80ರಿಂದ 90ರಷ್ಟು ವಸೂಲಾತಿಯಾದರೆ ಮೇಲ್ಮಟ್ಟದ ಬ್ಯಾಂಕ್‌ಗಳಿಂದ ಹೆಚ್ಚಿನ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ. ಸಾಲ ವಸೂಲಾತಿ ಕಡಿಮೆಯಾಗಿರುವುದೇ ಬ್ಯಾಂಕಿನ ಆರ್ಥಿಕ ಸಂಕಷ್ಟಕ್ಕೆ ಪ್ರಮುಖ ಕಾರಣವಾಗಿದೆ” ಎಂದು ಹೇಳಿದರು.

“ಸಾಲ ಮನ್ನಾ ಯೋಜನೆಗಳ ಸಂದರ್ಭದಲ್ಲಿ ಕೆಲ ರೈತರು ಮಾತ್ರ ಬಾಕಿ ಪಾವತಿಸಿದ್ದಾರೆ. ಇದರಿಂದ ವಸೂಲಾತಿ ಪ್ರಮಾಣದಲ್ಲಿ ಸುಧಾರಣೆಯಾಗಿದ್ದರೂ, ಇನ್ನೂ ನಿರೀಕ್ಷಿತ ಮಟ್ಟ ತಲುಪಿಲ್ಲ. ಬ್ಯಾಂಕಿನಿಂದ ಸಾಲ ಪಡೆದಿರುವ ರೈತರು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ ಮಾತ್ರ ಬ್ಯಾಂಕಿನ ಹಣಕಾಸು ಸ್ಥಿತಿ ಸುಧಾರಿಸಲು ಸಾಧ್ಯ” ಎಂದು ಮನವಿ ಮಾಡಿದರು.

ಚಿಮುಲ್ ನಿರ್ದೇಶಕ ಹುಜುಗೂರು ಎಂ. ರಾಮಯ್ಯ ಮಾತನಾಡಿ, “ಸಾಲ ಮನ್ನಾ ಕುರಿತು ಕೆಲ ರೈತರಲ್ಲಿ ತಪ್ಪು ಕಲ್ಪನೆ ಉಂಟಾಗಿದೆ. ಬ್ಯಾಂಕ್‌ನಲ್ಲಿರುವ ಅಸಲು ಮೊತ್ತವೂ ಸಂಪೂರ್ಣವಾಗಿ ಮನ್ನಾ ಆಗುತ್ತದೆ ಎಂಬ ನಿರೀಕ್ಷೆಯಿಂದ ಸಾಲ ಮರುಪಾವತಿ ಮಾಡದೆ ಇರುವುದರಿಂದ ಬ್ಯಾಂಕ್‌ಗೆ ಆರ್ಥಿಕ ಹೊರೆ ಉಂಟಾಗಿದೆ” ಎಂದರು.

“ಶೇ 3ರಷ್ಟು ಬಡ್ಡಿದರದಲ್ಲಿ ನೀಡಲಾಗುವ ಕೃಷಿ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಇತರ ರೈತರಿಗೆ ಸಾಲ ಒದಗಿಸುವುದು ಕಷ್ಟವಾಗಲಿದೆ. ಸಹಕಾರಿ ಬ್ಯಾಂಕ್‌ಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ದೊರೆಯುವ ಸಾಲದ ಸೌಲಭ್ಯವನ್ನು ರೈತರು ಉಳಿಸಿಕೊಳ್ಳಬೇಕು” ಎಂದು ಅವರು ಹೇಳಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಕೃಷಿ ಸಾಲದ ಬಡ್ಡಿದರಕ್ಕೆ ಹೋಲಿಸಿದರೆ ಪಿ.ಎಲ್.ಡಿ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆಯುತ್ತದೆ. ಸುಮಾರು ಎಂಟು ದಶಕಗಳ ಇತಿಹಾಸ ಹೊಂದಿರುವ ಈ ಬ್ಯಾಂಕ್ ಅನ್ನು ರೈತರು ಹಾಗೂ ಸದಸ್ಯರು ಉಳಿಸಿಕೊಳ್ಳುವ ಜವಾಬ್ದಾರಿ ಹೊಂದಿದ್ದಾರೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಪದಾಧಿಕಾರಿಗಳು ಮನವಿ ಮಾಡಿದರು.

ಸಭೆಯಲ್ಲಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ಜಿ. ಸುರೇಶ್, ನಿರ್ದೇಶಕರಾದ ಟಿ.ಎಲ್. ಅಂಬರೀಷ್, ಎಂ. ಮುರಳಿ, ರಾಮಚಂದ್ರ, ಎಂ.ಪಿ. ರವಿ, ಡಿ.ವಿ. ವೆಂಕಟೇಶಪ್ಪ, ಎನ್. ಚಂದ್ರನಾಥ್, ಕೆ.ಪಿ. ಕಿಶೋರ್, ಕೆ. ಆನಂದ್, ಕೆ.ಎಂ. ಬೈರೇಗೌಡ, ಮೇಲೂರು ಮಂಜುನಾಥ್, ಚೀಮನಹಳ್ಳಿ ಗೋಪಾಲ್, ಮುಗಿಲಡಿಪಿ ನಂಜಪ್ಪ, ಎಚ್.ಜಿ.ಗೋಪಾಲಗೌಡ ಹಾಗೂ ವ್ಯವಸ್ಥಾಪಕ ಬಿ.ಆರ್. ವೇಣುಗೋಪಾಲ್ ಇದ್ದರು.

ಈ ಸಭೆಗೂ ಮುನ್ನ ಪ್ರಕಟವಾಗಿದ್ದ 88ನೇ ಸಹಕಾರಿ ವರ್ಷದ ಪಿ.ಎಲ್.ಡಿ ಬ್ಯಾಂಕ್ ಮಹಾಸಭೆ ಸೆ.19ಕ್ಕೆ ಎಂಬ ವರದಿಯನ್ನೂ ಓದಿ.

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ

error: Content is protected !!
Exit mobile version