Home News ಟಾಸ್ಕ್ ಫೋರ್ಸ್ ಸದಸ್ಯರು ಚುರುಕಾಗಿ ಕಾರ್ಯನಿರ್ವಹಿಸಬೇಕು – ಜಿಲ್ಲಾಧಿಕಾರಿ ಆರ್.ಲತಾ

ಟಾಸ್ಕ್ ಫೋರ್ಸ್ ಸದಸ್ಯರು ಚುರುಕಾಗಿ ಕಾರ್ಯನಿರ್ವಹಿಸಬೇಕು – ಜಿಲ್ಲಾಧಿಕಾರಿ ಆರ್.ಲತಾ

0

ಜಿಲ್ಲಾದ್ಯಂತ ಎಂಟೂವರೆ ಸಾವಿರ ರ‍್ಯಾಪಿಡ್ ಆಂಟಿಜನ್ ಕಿಟ್ ಗಳನ್ನು ವಿತರಿಸಲಾಗಿದ್ದು, ಕೊರೊನಾ ಪಾಸಿಟಿವ್ ಅಥವಾ ನೆಗೆಟಿವ್ ಬಂದಿರುವ ಬಗ್ಗೆ ವರದಿ ವಿಳಂಬವಾಗದೇ ಕೇವಲ ಅರ್ಧಗಂಟೆಯೊಳಗೆ ತಿಳಿದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

 ತಾಲ್ಲೂಕಿನ ಹಂಡಿಗನಾಳ ಗ್ರಾಮ ಮತ್ತು ನಗರದ 11 ಮತ್ತು 21 ನೇ ವಾರ್ಡ್ ಗಳಿಗೆ ಶುಕ್ರವಾರ ಭೇಟಿ ನೀಡಿ, ಮನೆಗಳ ಹತ್ತಿರ ಹೋಗಿ ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ ಅಥವಾ ನಗರಸಭೆ, ಆರೋಗ್ಯ ಕಾರ್ಯಕರ್ತರು ಭೇಟಿ ನೀಡುತ್ತಿರುವ ಬಗ್ಗೆ ಖುದ್ದಾಗಿ ಮಾಹಿತಿ ಪಡೆದು ನಂತರ ಅವರು ಮಾತನಾಡಿದರು.

 ಗ್ರಾಮಮಟ್ಟದಲ್ಲಿ ಮತ್ತು ವಾರ್ಡ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಮಾಡಲಾಗಿದೆ. ಟಾಸ್ಕ್ ಫೋರ್ಸ್ ಸದಸ್ಯರಿಗೆ ಆಯಾ ವಾರ್ಡ್ ಅಥವಾ ಗ್ರಾಮದ ಮನೆಗಳನ್ನು ಹಂಚಿಕೆ ಮಾಡಿದೆ. ಪ್ರತಿಯೊಬ್ಬ ಸದಸ್ಯರೂ ಅವರುಗಳಿಗೆ ಸಂಬಂಧಿಸಿದ ಮನೆಗಳವರ ವಾಟ್ಸಪ್ ನಂಬರನ್ನು ಹೊಂದಿರಬೇಕು. ಯಾವುದೇ ಸಮಸ್ಯೆಗಳಿದ್ದರೂ ಹಂಚಿಕೊಂಡು, ಅಕಸ್ಮಾತ್ ಜ್ವರ, ಕೆಮ್ಮು, ನೆಗಡಿ ಮುಂತಾದ ಕೊರೊನಾ ಲಕ್ಷಣಗಳು ಯಾರಿಗೇ ಬಂದರೂ ತಕ್ಷಣ ಮನೆಗಳ ಬಳಿ ಹೋಗಿ ರ‍್ಯಾಪಿಡ್ ಆಂಟಿಜನ್ ಕಿಟ್ ಮೂಲಕ ಪರೀಕ್ಷೆ ನಡೆಸಬೇಕು. ಮುಖ್ಯವಾಗಿ ಜನರಲ್ಲಿ ಆತಂಕ ದೂರ ಮಾಡಿ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ಟಾಸ್ಕ್ ಫೋರ್ಸ್ ಸದಸ್ಯರ ಕಾರ್ಯ ವೈಖರಿಯನ್ನು ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಎಸ್.ಪಿ ಅವರೊಂದಿಗೆ ಖುದ್ದಾಗಿ ಹಲವು ಮನೆಗಳವರನ್ನು ಭೇಟಿ ಮಾಡಿದ್ದಾಗಿ ಹೇಳಿದರು.

 ಕಂಟೈನ್ ಮೆಂಟ್ ಜೋನ್ ನಲ್ಲಿರುವವರು ಅಕಸ್ಮಾತ್ ಬಡವರಾಗಿದ್ದ ಪಕ್ಷದಲ್ಲಿ ಜಿಲ್ಲಾಡಳಿತ ಅವರಿಗೆ ದಿನಸಿಯನ್ನು ನೀಡುತ್ತದೆ. ಇಲ್ಲವಾದಲ್ಲಿ ಆ ಪ್ರದೇಶದವರು ಅವಶ್ಯಕ ವಸ್ತುಗಳನ್ನು ಕೊಳ್ಳಲು ನೆರವಾಗುತ್ತದೆ ಎಂದರು.

 ನಗರದ ಹನ್ನೊಂದನೇ ವಾರ್ಡಿನ ಕೆಲವು ಮನೆಗಳವರು ನಮ್ಮನ್ನು ಯಾರೂ ಭೇಟಿ ನೀಡಿಲ್ಲ, ನಮ್ಮ ವಾಟ್ಸಪ್ ನಂಬರನ್ನು ತೆಗೆದುಕೊಂಡಿಲ್ಲ ಎಂದು ತಿಳಿಸಿದಾಗ, ತ್ವರಿತವಾಗಿ ಎಲ್ಲಾ ಕುಟುಂಬದವರ ಮಾಹಿತಿ ಇರಬೇಕು. ಮುನ್ನೆಚ್ಚರಿಕೆ ವಹಿಸುವುದರಿಂದ ನಾವು ಸಾಕಷ್ಟು ತೊಂದರೆಗಳನ್ನು ತಪ್ಪಿಸಬಹುದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

 ಪೊಲೀಸ್ ಎಸ್.ಪಿ ಮಿಥುನ್ ಕುಮಾರ್, ತಹಶೀಲ್ದಾರ್ ಕೆ.ಅರುಂಧತಿ, ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಡಾ.ವಾಣಿ, ನೋಡಲ್ ಅಧಿಕಾರಿ ಶಿವಕುಮಾರ್ ಹಾಜರಿದ್ದರು.

error: Content is protected !!