Home News ಶ್ರದ್ಧಾಭಕ್ತಿಯಿಂದ ವೈಕುಂಠ ಏಕಾದಶಿಯ ಆಚರಣೆ

ಶ್ರದ್ಧಾಭಕ್ತಿಯಿಂದ ವೈಕುಂಠ ಏಕಾದಶಿಯ ಆಚರಣೆ

0
Mallur Sainatha Gnana Mandir

ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿ ವೈಕುಂಠ ಏಕಾದಶಿ ಎಂಬ ವಿಶೇಷ ದಿನವೆಂದು ತಾಲ್ಲೂಕಿನ ಪ್ರಮುಖ ವೆಂಕಟೇಶ್ವರ, ಶ್ರೀನಿವಾಸ, ವಿಷ್ಣು ದೇವಸ್ಥಾನಗಳಲ್ಲಿ ಶುಕ್ರವಾರ ವಿಶೇಷ ಪೂಜೆಗಳನ್ನು ಏರ್ಪಡಿಸಿದ್ದರು.

 ಕೆಲವು ದೇವಸ್ಥಾನಗಳಲ್ಲಿ ನಿರ್ಮಿಸಿದ್ದ ವೈಕುಂಠ ದ್ವಾರದ ಒಳಗೆ ಹೋಗಿ ಬಂದರೆ ಮೋಕ್ಷ ಸಿಗುವುದೆಂಬ ನಂಬಿಕೆಯಿಂದ ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.



 ತಾಲ್ಲೂಕಿನ ಮಳ್ಳೂರು ಸಮೀಪದ ಶ್ರೀ ಸಾಯಿನಾಥ ಜ್ಞಾನಮಂದಿರ, ಚೌಡಸಂದ್ರದ ಸೋಮೇಶ್ವರಸ್ವಾಮಿ ದೇವಸ್ಥಾನ, ತಲಕಾಯಲಬೆಟ್ಟದ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯ, ಚಿಕ್ಕದಾಸರಹಳ್ಳಿ ಬಳಿಯ ಬ್ಯಾಟರಾಯಸ್ವಾಮಿ ದೇವಾಲಯ, ಜಂಗಮಕೋಟೆ ಬಳಿಯ ಮುತ್ಯಾಲಮ್ಮ ದೇವಸ್ಥಾನ, ನಗರದ ಹೌಸಿಂಗ್ ಬೋರ್ಡ್ ಕಾಲೋನಿಯ ಕಲ್ಯಾಣ ವೆಂಕಟೇಶ್ವರಸ್ವಾಮಿ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳನ್ನು ನಡೆಸಲಾಗಿತ್ತು.

 ತಾಲ್ಲೂಕಿನ ಮಳ್ಳೂರು ಸಮೀಪದ ಶ್ರೀ ಸಾಯಿನಾಥ ಜ್ಞಾನಮಂದಿರದಲ್ಲಿ ಶುಕ್ರವಾರ ವೈಕುಂಠ ಏಕಾದಶಿಯ ಪ್ರಯುಕ್ತ ಸಪ್ತದ್ವಾರದ ವೈಕುಂಠವನ್ನೇ ಸೃಷ್ಟಿಸಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳಿಂದ ಹಾಗೂ ವಿವಿಧ ತಾಲ್ಲೂಕುಗಳಿಂದ ಭಕ್ತರು ಆಗಮಿಸಿ ದೇವರ ದರ್ಶನವನ್ನು ಪಡೆದರು. ದೇವಾಲಯದ ಸೇವಾಕರ್ತರು ಶ್ವೇತವಸ್ತ್ರಧಾರಿಗಳಾಗಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು. ಭಕ್ತರಿಗೆಲ್ಲ ಪ್ರಸಾದ ವಿನಿಯೋಗ ನಡೆಯಿತು. ಹೂವಿನಿಂದ ಅಲಂಕೃತಗೊಂಡ ಉಯ್ಯಾಲೆಯಲ್ಲಿ ವೆಂಕಟೇಶ್ವರ, ಶ್ರೀದೇವಿ, ಭೂದೇವಿಯ ಚಿನ್ನದ ಬಣ್ಣದ ವಿಗ್ರಹಗಳನ್ನಿಟ್ಟು ಭಕ್ತರು ತೂಗಲು ಅವಕಾಶ ಮಾಡಿಕೊಡಲಾಗಿತ್ತು. ವಿವಿಧ ಹೂಗಳಿಂದ ಅಲಂಕೃತಗೊಂಡ ವೈಕುಂಠದಲ್ಲಿ ವೆಂಕಟೇಶ್ವರ ಮತ್ತು ಲಕ್ಷ್ಮಿದೇವಿಯ ಬೃಹತ್ ಮೂರ್ತಿಗಳಿಗೆ ವಿಶೇಷ ಪೂಜೆ ನಡೆಯಿತು.

 “ವೈಕುಂಠ ಏಕಾದಶಿ ವಿಶೇಷ ದಿನ. ಈ ದಿನ ವೈಕುಂಠ ದ್ವಾರದ ಒಳಗೆ ಹೋಗಿ ಬಂದರೆ ಮೋಕ್ಷ ಸಿಗುವುದೆಂದು ನಂಬಿಕೆಯಿದೆ. ವೈಕುಂಠ ಏಕಾದಶಿಯಂದು ವೈಕುಂಠದ(ಸ್ವರ್ಗದ) ಬಾಗಿಲು ತೆರೆದಿರುತ್ತದೆ. ಆದರಿಂದ ವೆಂಕಟೇಶ್ವರ ಅಥವಾ ವಿಷ್ಣುವಿನ ದರ್ಶನ ಪಡೆಯುವುದರಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಭಾವನೆ ಭಕ್ತರಲ್ಲಿದೆ. “ವೆಂಕಟೇಶೋ ವಾಸುದೇವೋ ಪ್ರದ್ಯುಮ್ನೋ ಅಮಿತವಿಕ್ರಮಃ, ಸಂಕರ್ಷಣೋ ಅನಿರುದ್ಧಶ್ಚ ಶೇಶಾದ್ರಿಪತಿರೇವಚ” ಎಂದು ವೆಂಕಟೇಶ್ವರ ಸ್ತೋತ್ರವನ್ನು ಪಠಿಸುವುದರಿಂದ ಕಷ್ಟಗಳು ನಿವಾರಣೆಯಾಗುತ್ತದೆ. ಸಪ್ತ ದ್ವಾರಗಳನ್ನು ದಾಟಿ ವೈಕುಂಠದಲ್ಲಿ ವೆಂಕಟೇಶ್ವರಸ್ವಾಮಿಯ ದರ್ಶನ ಪಡೆದು, ವಿಘ್ನೇಶ್ವರ, ಸಾಯಿಬಾಬ ಮತ್ತು ಅಯ್ಯಪ್ಪಸ್ವಾಮಿಯರ ದರ್ಶನವನ್ನು ಪಡೆದು ಪ್ರಸಾದ ಸ್ವೀಕರಿಸಿ ದೇವರ ಅನುಗ್ರಹಕ್ಕೆ ಈ ಪವಿತ್ರ ದಿನ ಎಲ್ಲರೂ ಪಾತ್ರರಾಗಬೇಕೆಂಬುದು ನಮ್ಮ ಉದ್ದೇಶವಾಗಿದೆ” ಎಂದು ಶ್ರೀ ಸಾಯಿನಾಥ ಜ್ಞಾನಮಂದಿರ ದೇವಾಲಯ ಸಮಿತಿ ಅಧ್ಯಕ್ಷ ಎಂ.ನಾರಾಯಣಸ್ವಾಮಿ ತಿಳಿಸಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version