ಪೂರ್ಣ ಪುಟ · Open full page

ಅವಧಿ ಮೀರಿದ ಔಷಧಿ ಮೂಟೆಗಟ್ಟಲೆ ಕೆರೆಯಂಗಳದಲ್ಲಿ: ವಿಲೇವಾರಿ ಹೊಣೆ ಯಾರದು?

Heap of expired medicine strips and boxes dumped near a lake beside a sack

Sidlaghatta : ಶಿಡ್ಲಘಟ್ಟ ನಗರದ ಗೌಡನ ಕೆರೆ ಇದೀಗ ತ್ಯಾಜ್ಯ ವಿಲೇವಾರಿ ತಾಣವಾಗಿ ಮಾರ್ಪಟ್ಟಿದ್ದು, ಕೆರೆಯ ಆವರಣದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಕಂಡುಬರುತ್ತಿದೆ. ಸುಮಾರು ಮೂರು ಮೂಟೆಗಳಷ್ಟು ಅವಧಿ ಮೀರಿದ ಔಷಧಿಗಳನ್ನು ಕೆರೆಗೆ ತಂದು ಸುರಿಯಲಾಗಿದ್ದು, ಒಂದು ಮೂಟೆಯಲ್ಲಿನ ಔಷಧಿಗಳು ಹಾಗೆಯೇ ಪತ್ತೆಯಾಗಿವೆ. ಇದರ ಜೊತೆಗೆ ಗ್ಯಾರೇಜ್‌ಗಳಿಂದ ಹೊರಬರುವ ವೇಸ್ಟ್ ರೆಕ್ಸಿನ್‌, ಪ್ಲಾಸ್ಟಿಕ್‌ ಹಾಗೂ ವಾಹನಗಳ ಬಿಡಿಭಾಗಗಳ ತ್ಯಾಜ್ಯವನ್ನೂ ಇಲ್ಲಿ ಸುರಿಯಲಾಗುತ್ತಿದೆ.

ಮದುವೆ, ಸಮಾರಂಭ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಬಳಿಕ ಉಳಿಯುವ ಊಟದ ಎಲೆಗಳು, ಆಹಾರ ತ್ಯಾಜ್ಯ ಹಾಗೂ ಇತರೆ ಕಸವನ್ನೂ ತಂದು ಕೆರೆಯ ಪ್ರದೇಶದಲ್ಲಿ ಸುರಿಯಲಾಗುತ್ತಿದೆ. ಇದರಿಂದ ಕೆರೆಯ ಸುತ್ತಮುತ್ತಲಿನ ಪರಿಸರ ಕಲುಷಿತಗೊಳ್ಳುತ್ತಿದ್ದು, ದುರ್ವಾಸನೆ ಹಾಗೂ ಆರೋಗ್ಯದ ಅಪಾಯದ ಆತಂಕ ಸ್ಥಳೀಯರನ್ನು ಕಾಡುತ್ತಿದೆ.

ಅವಧಿ ಮೀರಿದ ಔಷಧಿ ಸುರಿದರೆ ಏನು ಅಪಾಯ?

ಔಷಧಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಾದ ಅಗತ್ಯವಿದ್ದರೂ, ಅವಧಿ ಮೀರಿದ ಔಷಧಿಗಳನ್ನು ಮೂಟೆಗಟ್ಟಲೆ ತಂದು ಕೆರೆಯ ಬಳಿ ಸುರಿದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಕೆರೆಯ ಸುತ್ತಮುತ್ತ ತ್ಯಾಜ್ಯ ಸುರಿಯುವುದನ್ನು ತಡೆಯಲು ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪ. ಹಗಲು-ರಾತ್ರಿ ಎನ್ನದೆ ವಿವಿಧ ರೀತಿಯ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದ್ದರೂ, ಇದನ್ನು ನಿಯಂತ್ರಿಸುವವರು ಯಾರೂ ಇಲ್ಲದಂತಾಗಿದೆ ಎಂದು ಅವರು ಹೇಳುತ್ತಾರೆ. ಇದೇ ರೀತಿ ಕೆರೆಯ ಆವರಣದಲ್ಲಿ ತ್ಯಾಜ್ಯ ಸುರಿಯುವುದು ಮುಂದುವರಿದಿರುವ ಕುರಿತು ಈ ಹಿಂದೆಯೂ ವರದಿಯಾಗಿತ್ತು.

ಸ್ಥಳೀಯರ ಒತ್ತಾಯವೇನು?

ಕೆರೆಯ ಆವರಣದಲ್ಲಿ ಸುರಿದಿರುವ ಔಷಧಿ ಸೇರಿದಂತೆ ಎಲ್ಲ ಬಗೆಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ತೆರವುಗೊಳಿಸಬೇಕು. ತ್ಯಾಜ್ಯ ಸುರಿಯುವವರನ್ನು ಪತ್ತೆಹಚ್ಚಿ ದಂಡ ವಿಧಿಸಬೇಕು. ಕೆರೆಯ ಸುತ್ತ ನಿಗಾ ವ್ಯವಸ್ಥೆ ಕಲ್ಪಿಸಿ, ಇಂತಹ ಕೃತ್ಯಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

ಇದನ್ನೂ ಓದಿ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Exit mobile version