ನಗರದಲ್ಲಿ ಮಂಗಳವಾರ ತಹಶೀಲ್ದಾರ್ ಕೆ.ಅರುಂಧತಿ ಅವರಿಗೆ ರೈತರ ಸಮಸ್ಯೆಗಳ ಕುರಿತಾದ ಮನವಿಯನ್ನು ಸಲ್ಲಿಸಿ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಮಾತನಾಡಿದರು.
ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಅನ್ಯಾಯದ ಕುರಿತಾಗಿ ಹೋರಾಡಿ ಹುತಾತ್ಮರಾದ ರೈತರ ನೆನಪಿನಲ್ಲಿ ಪ್ರತಿ ವರ್ಷ ಜುಲೈ 21ರಂದು ರೈತ ಹುತಾತ್ಮ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ರೈತರ ಹತ್ತು ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿ ತಾಲ್ಲೂಕು ಆಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ರೈತರ ವಿರೋಧದ ನಡುವೆಯೂ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ರೈತರ ಕೊರಳಿಗೆ ನೇಣು ಕುಣಿಕೆ ಹಾಕಿದೆ. ಈ ಕಾಯ್ದೆಯನ್ನು ಕೂಡಲೇ ವಾಪಸ್ ಪಡೆಯಬೇಕು. ಎ.ಪಿ.ಎಂ.ಸಿ ಯ ದೋಷಗಳನ್ನು ಸರಿಪಡಿಸದೇ ಇಡೀ ಮಾರುಕಟೆ ವ್ಯವಸ್ಥೆಯನ್ನು ಕಾರ್ಪೊರೇಟ್ ಕಂಪೆನಿಗಳ ವಶಕ್ಕೆ ಒಪ್ಪಿಸಿರುವುದು ಸರಿಯಲ್ಲ. ವಿದ್ಯುತ್ ಸರಬರಾಜನ್ನು ಖಾಸಗಿಯವರಿಗೆ ವಹಿಸಲು ಕೇಂದ್ರ ಸರ್ಕಾರ ತಿದ್ದುಪಡಿ ಕರಡನ್ನು ಹೊರಡಿಸಿದೆ. ಇದರಿಂದ ರೈತ ಸಮುದಾಯಕ್ಕೆ ತೊಂದರೆಯಾಗುತ್ತದೆ. ಕೊರೊನಾ ಸಂಕಷ್ಟ ಪರಿಹಾರ ಸಂಪೂರ್ಣವಾಗಿ ಜಾರಿಯಾಗಲಿ. ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಯಡಿ ರೈತರಿಗೆ ಬರಬೇಕಾದ ಪರಿಹಾರದ ಹಣ ಇನ್ನೂ ಬಾಕಿ ಇದೆ. ಬ್ಯಾಂಕುಗಳಿಂದ ರೈತರು ಪಡೆದಿರುವ ಸಾಲವನ್ನು ಮರುಪಾವತಿ ಮಾಡಲು ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಒಂದು ವರ್ಷ ವಿಸ್ತರಿಸಬೇಕು. ಕೃಷಿ ಬಳಕೆಗೆ ಸರಳ ರೀತಿಯಲ್ಲಿ ಬಡ್ಡಿ ರಹಿತ ಸಾಲವನ್ನು ಒದಗಿಸಬೇಕು.
ಜಿಲ್ಲೆಯಲ್ಲಿ ರೈತರು ಬೆಳೆದ ಬೆಳೆಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಹೈನುಗಾರಿಕೆಗೆ ಅತ್ಯಗತ್ಯವಾದ ಬೂಸಾ, ಚಕ್ಕೆ, ಫೀಡು ಮುಂತಾದವುಗಳು ನಿಗದಿತ ಬೆಲೆಗೆ ಸಿಗುವಂತಾಗಬೇಕು. ಹೂ ಬೆಳೆಯುವ ರೈತರು ಕಂಗಾಲಾಗಿದ್ದಾರೆ. ಬೇರೆ ರಾಜ್ಯಗಳಿಗೆ ಹೂಗಳನ್ನು ಕಳುಹಿಸಲು ಅವಕಾಶ ಮಾಡಿಕೊಡಬೇಕು ಮೊದಲಾದ ಬೇಡಿಕೆಗಳ ಪಟ್ಟಿಯನ್ನು ಮನವಿ ಪತ್ರದೊಂದಿಗೆ ನೀಡಿದರು.
ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಮುನಿಕೆಂಪಣ್ಣ, ಉಪಾಧ್ಯಕ್ಷ ಶ್ಯಾಮ್, ಕಾರ್ಯಾಧ್ಯಕ್ಷ ಆಂಜಿನಪ್ಪ, ಮುನಿಯಪ್ಪ, ಅಶ್ವತ್ಥನಾರಾಯಣ, ರಮೇಶ್, ನಾರಾಯಣಸ್ವಾಮಿ, ಮುನೇಗೌಡ, ನರಸಿಂಹಮೂರ್ತಿ, ಕೇಶವ, ಮುರಳಿ, ಸುಬ್ಬರೆಡ್ಡಿ ಹಾಜರಿದ್ದರು.