Home News ರೈತವಿರೋಧಿ ಕಾಯ್ದೆಗಳನ್ನು ರದ್ದುಪಡಿಸಲು ರೈತಸಂಘದಿಂದ ಆಗ್ರಹ

ರೈತವಿರೋಧಿ ಕಾಯ್ದೆಗಳನ್ನು ರದ್ದುಪಡಿಸಲು ರೈತಸಂಘದಿಂದ ಆಗ್ರಹ

0

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮತ್ತು ರೈತವಿರೋಧಿ ಕಾಯ್ದೆಗಳನ್ನು ರದ್ದುಪಡಿಸಲು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಸೋಮವಾರ ಮುಖ್ಯಮಂತ್ರಿಗಳಿಗೆ ಮನವಿಯನ್ನು ಶಿರಸ್ತೆದಾರ್ ಮಂಜುನಾಥ್ ಅವರ ಮೂಲಕ ಸಲ್ಲಿಸಿದರು.

 ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ ಕಂಗಾಲಾಗಿ ಶೇಕಡಾ 75 ರಷ್ಟು ರೈತರು ಇಂದು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಹೈನುಗಾರಿಕೆಯನ್ನು ಉಪಕಸುಬಾಗಿ, ಕೆಲವೆಡೆ ಮುಖ್ಯ ಕಸುಬಾಗಿ ಅವಲಂಬಿದ್ದರೆ, ಅದಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈ ಕಸುಬು ಕೂಡ ಬಿಡುವಂತಾಗಿದೆ. ರೈತರಿಗೆ ಅತ್ಯಗತ್ಯವಾದ ಭೂಮಿ, ನೀರು, ವಿದ್ಯುತ್ ಮತ್ತು ವೈಜ್ಞಾನಿಕ ಬೆಲೆಯನ್ನು ಕೊಡಲು ಎಲ್ಲಾ ಸರ್ಕಾರಗಳು ವಿಫಲವಾಗಿವೆ. ಕೊರೊನಾ ಬಂದು ಜನ ತತ್ತರಿಸುತ್ತಿರುವ ಹೊತ್ತಿನಲ್ಲಿ ಸರ್ಕಾರ ಭೂಸ್ವಾಧೀನ ಕಾಯ್ದೆ, ಭೂಸುಧಾರಣೆ ಕಾಯ್ದೆ, ಎ.ಪಿ.ಎಂ.ಸಿ ಮತ್ತು ಬೀಜ ಕಾಯ್ದೆಗಳಂತಹ ರೈತ ವಿರೋಧಿ ಕಾಯ್ದೆಗಳ ಮೂಲಕ ರೈತರ ಸರ್ವನಾಶ ಮಾಡಲು ಮುಂದಾಗಿದೆ. ರೈತರ ಕೃಷಿಯಲ್ಲಿ ಕಾರ್ಪೋರೇಟ್ ಕಂಪೆನಿಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿದರು.

  ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿಯನ್ನು ಕೂಡಲೆ ವಾಪಸ್ ಪಡೆಯಬೇಕು. ಭೂಸುಧಾರಣೆ ತಿದ್ದುಪಡಿಯಿಂದ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ತಮ್ಮ ಜಮೀನುಗಳನ್ನು ಕಳೆದುಕೊಳ್ಳುವರು. ಕೂಡಲೇ ಭೂಸುಧಾರಣೆ ತಿದ್ದುಪಡಿಯನ್ನು ವಾಪಸ್ಸು ಪಡೆಯಬೇಕು. ವಿದ್ಯುತ್ ಕಾಯ್ದೆ ತಿದ್ದುಪಡಿಯಿಂದ ರೈತರು ಕೃಷಿಯನ್ನೇ ಬಿಡಬೇಕಾಗುತ್ತದೆ. ತಕ್ಷಣ ಆ ಕಾಯ್ದೆಯನ್ನು ವಾಪಸ್ಸು ಪಡೆಯಬೇಕು. ಯಾವುದೇ ಕಾರಣಕ್ಕೂ ಬೀಜ ಹಕ್ಕು ರೈತನ ಕೈತಪ್ಪಬಾರದು. ಬೀಜ ಕಾಯ್ದೆ 2019, ಭೂಸ್ವಾಧೀನ ಕಾಯ್ದೆ  2019, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ಮಾದರಿ ಭೂ ಮಸೂದೆ 2016 ಕೂಡಲೇ ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದರು.

 ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ಟಿ.ಕೃಷ್ಣಪ್ಪ, ಆರ್.ರಮೇಶ್, ಎಸ್.ಎಂ.ನಾರಾಯಣಸ್ವಾಮಿ, ವೇಣುಗೋಪಾಲ್, ರಾಮಕೃಷ್ಣಪ್ಪ, ರಾಮಚಂದ್ರಪ್ಪ, ಪಿ.ವಿ.ದೇವರಾಜ್, ಬೀರಪ್ಪ, ಅಶ್ವತ್ಥನಾರಾಯಣ, ಶ್ರೀಧರ್, ರವಿ ಹಾಜರಿದ್ದರು.