Home News ಕೃಷಿ ಸಚಿವರ ವಿರುದ್ಧ ರೈತ ಸಂಘದ ಸದಸ್ಯರ ಪ್ರತಿಭಟನೆ

ಕೃಷಿ ಸಚಿವರ ವಿರುದ್ಧ ರೈತ ಸಂಘದ ಸದಸ್ಯರ ಪ್ರತಿಭಟನೆ

0

ಕೊಪ್ಪಳದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ಮಾತುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ಅವರ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ ಎಂದು ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಹೇಳಿದರು.

 ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಕೊಪ್ಪಳದಲ್ಲಿ ನೀಡಿರುವ ಹೇಳಿಕೆಯನ್ನು ಖಂಡಿಸಿ ನಗರದ ಬಸ್ ನಿಲ್ದಾಣದ ಬಳಿ ಶನಿವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಮಾನವ ಸರಪಣಿಯನ್ನು ನಿರ್ಮಿಸಿ, ಸಚಿವರ ಭಾವಚಿತ್ರವನ್ನು ಸುಟ್ಟು ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 “ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಕೇವಲ ಹಾವೇರಿಗೆ, ಹಿರೇಕೆರೂರಿಗೆ ಸಚಿವರಲ್ಲ, ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅವರು ಸಚಿವರು. ಇವತ್ತು ಭೂಮಿಗೆ ಅಗತ್ಯವಾದ ಯೂರಿಯಾ ಸಿಗುತ್ತಿಲ್ಲ. ನೀವು ಸಿನಿಮಾ ನಟನಂತೆ ನಟನೆ ಮಾಡದೇ ರೈತರಿಗೆ ಅತ್ಯಗತ್ಯವಾದ ಬೀಜ ಮತ್ತು ಗೊಬ್ಬರ ಕೊಡಿ ಎಂದು ಅಧ್ಯಕ್ಷರು ಹೇಳಿದ್ದರು. ಕೃಷಿ ವಿಶ್ವವಿದ್ಯಾಲಯದಲ್ಲಿ ಆಯ್ಕೆಗಾಗಿ ರೈತರ ಮಕ್ಕಳಿಗಾಗಿ ಆಯೋಜಿಸಬೇಕಿದ್ದ ಪರೀಕ್ಷೆಯನ್ನು ರದ್ದು ಮಾಡಿ 3,200 ರೈತ ಮಕ್ಕಳಿಗೆ ತೊಂದರೆ ಮಾಡಿದ್ದು ಏಕೆ ಎಂದು ನಮ್ಮ ರಾಜ್ಯಾಧ್ಯಕ್ಷ ಕೋಡಿ ಹಳ್ಳಿ ಚಂದ್ರಶೇಖರ್ ಸಚಿವರನ್ನು ಪ್ರಶ್ನಿಸಿದ್ದರು. ಅವರು ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ. ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ” ಎಂದರು.

 ರೈತ ಸಂಘದ ಸದಸ್ಯರು ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು, ಬೆಂಕಿ ಹಚ್ಚಿ ಪ್ರತಿಭಟಿಸಿದರು.

 ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಮುನಿನಂಜಪ್ಪ, ವೇಣು, ಬೀರಪ್ಪ, ಕಿಶೋರ್, ರಮೇಶ್, ವೈ.ರಾಮಕೃಷ್ಣಪ್ಪ, ಅಂಬರೀಶ್, ನಾಗರಾಜ್, ನಾರಾಯಣಸ್ವಾಮಿ, ಗಂಗಾಧರ್, ಅಶ್ವತ್ಥನಾರಾಯಣ್, ಏಜಾಜ್ ಹಾಜರಿದ್ದರು.

error: Content is protected !!