Home News ರೈತರ ದಸರಾದಲ್ಲಿ ಅಪರೂಪದ ಬೀಜ ತಳಿಗಳ ಪ್ರದರ್ಶನ: ಬಳ್ಳಿ ಆಲೂಗಡ್ಡೆಗೆ ಮೆಚ್ಚುಗೆ

ರೈತರ ದಸರಾದಲ್ಲಿ ಅಪರೂಪದ ಬೀಜ ತಳಿಗಳ ಪ್ರದರ್ಶನ: ಬಳ್ಳಿ ಆಲೂಗಡ್ಡೆಗೆ ಮೆಚ್ಚುಗೆ

0
Appegowdanahalli farmer Tyagaraj shows vine potato at Farmers Dasara Mysuru exhibition

Sidlaghatta : ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಪ್ರಗತಿಪರ ರೈತ ಎ.ಎಂ. ತ್ಯಾಗರಾಜ್ ಅವರು ಮೈಸೂರಿನಲ್ಲಿ ನಡೆದ 2026ರ ರೈತರ ದಸರಾದಲ್ಲಿ ವಿವಿಧ ಅಪರೂಪದ ಬೀಜ ತಳಿಗಳನ್ನು ಪ್ರದರ್ಶಿಸುವ ಮೂಲಕ ರೈತರ ಹಾಗೂ ಕೃಷಿ ಆಸಕ್ತರ ಗಮನ ಸೆಳೆದಿದ್ದಾರೆ.

ಮೂರು ದಿನಗಳ ಕಾಲ ನಡೆದ ರೈತರ ದಸರಾದ ಕೃಷಿ ವಸ್ತುಪ್ರದರ್ಶನದಲ್ಲಿ ಬಳ್ಳಿ ಆಲೂಗಡ್ಡೆ, ಬಣ್ಣಬಣ್ಣದ ಜೋಳ, ಬಿಳಿ ರಾಗಿ, ಕಪ್ಪು ಕಡಲೆ, ಕಪ್ಪು ಹುರಳಿ, ವಿವಿಧ ಸೊಪ್ಪಿನ ಬೀಜಗಳು, ನಾಟಿ ಸೋಂಪಿನ ಬೀಜಗಳು, ಸಿರಿಧಾನ್ಯಗಳು ಸೇರಿದಂತೆ ಹಲವು ಬಗೆಯ ಸ್ಥಳೀಯ ಹಾಗೂ ವೈವಿಧ್ಯಮಯ ಬೀಜ ತಳಿಗಳನ್ನು ಪ್ರದರ್ಶಿಸಿದರು. ಅವುಗಳ ವೈಶಿಷ್ಟ್ಯ, ಕೃಷಿ ಪದ್ಧತಿ ಮತ್ತು ಬೀಜ ಸಂರಕ್ಷಣೆಯ ಮಹತ್ವದ ಕುರಿತು ರೈತರಿಗೆ ಮಾಹಿತಿ ನೀಡಿ ಮಾರ್ಗದರ್ಶನ ಮಾಡಿದರು.

ತಮ್ಮ ತೋಟದಲ್ಲಿ ಬಳ್ಳಿ ಆಲೂಗಡ್ಡೆ ಬೆಳೆಯಲು ಆಸಕ್ತಿ

ಪ್ರದರ್ಶನದಲ್ಲಿ ತ್ಯಾಗರಾಜ್ ಅವರು ಪರಿಚಯಿಸಿದ ಬಳ್ಳಿ ಆಲೂಗಡ್ಡೆ ವಿಶೇಷ ಆಕರ್ಷಣೆಯಾಗಿತ್ತು. ಮಾಜಿ ಸಚಿವ ತನ್ವೀರ್ ಸೇಠ್ ಅವರು ಬಳ್ಳಿ ಆಲೂಗಡ್ಡೆಯ ಬಗ್ಗೆ ಆಸಕ್ತಿ ವ್ಯಕ್ತಪಡಿಸಿ, ಅದನ್ನು ತಮ್ಮ ತೋಟಕ್ಕೆ ತೆಗೆದುಕೊಂಡು ಹೋಗಿ ನೆಡುವುದಾಗಿ ತಿಳಿಸಿದ್ದಾರೆ. ಇದರಿಂದ ಈ ವಿಶಿಷ್ಟ ಬೆಳೆ ತಳಿಯ ಬಗ್ಗೆ ಪ್ರದರ್ಶನದಲ್ಲಿ ಗಮನ ಸೆಳೆಯಿತು.

ಇದೇ ವೇಳೆ, ದಕ್ಷಿಣ ಅಮೆರಿಕ ಖಂಡದ ಕೊಲಂಬಿಯಾ ದೇಶದಿಂದ ಆಗಮಿಸಿದ್ದ ಮಹಿಳೆಯರು ಬಳ್ಳಿ ಆಲೂಗಡ್ಡೆಯ ಬಗ್ಗೆ ಆಸಕ್ತಿ ತೋರಿ, ತ್ಯಾಗರಾಜ್ ಅವರಿಂದ ಅದನ್ನು ಪಡೆದುಕೊಂಡರು. ಈ ತಳಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು, ರೈತರ ದಸರಾ ಸ್ಥಳೀಯ ಬೆಳೆಗಳ ವೈವಿಧ್ಯವನ್ನು ಅಂತರರಾಷ್ಟ್ರೀಯ ಮಟ್ಟದ ಕೃಷಿ ಆಸಕ್ತರಿಗೂ ಪರಿಚಯಿಸುವ ವೇದಿಕೆಯಾಯಿತು.

ವಿವಿಧ ರಾಜ್ಯಗಳ ರೈತರಿಗೆ ಬೀಜಗಳ ಪರಿಚಯ

ರಾಜ್ಯದ ವಿವಿಧ ಜಿಲ್ಲೆಗಳಲ್ಲದೆ ಹೊರರಾಜ್ಯಗಳಿಂದಲೂ ರೈತರು ರೈತರ ದಸರೆಗೆ ಭೇಟಿ ನೀಡಿ ತ್ಯಾಗರಾಜ್ ಅವರ ಬೀಜ ಸಂಗ್ರಹದ ಕುರಿತು ಮಾಹಿತಿ ಪಡೆದುಕೊಂಡರು. ಸ್ಥಳೀಯ ಹಾಗೂ ಸಾಂಪ್ರದಾಯಿಕ ಬೀಜ ತಳಿಗಳನ್ನು ಸಂರಕ್ಷಿಸುವುದು, ಅವುಗಳನ್ನು ಇತರ ರೈತರಿಗೆ ಪರಿಚಯಿಸುವುದು ಮತ್ತು ಕೃಷಿ ಜ್ಞಾನವನ್ನು ಹಂಚಿಕೊಳ್ಳುವುದು ತಮ್ಮ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ. ವಿದೇಶಗಳಿಗೂ ಬಿತ್ತನೆ ಬೀಜಗಳನ್ನು ಒದಗಿಸಿರುವುದಾಗಿ ತ್ಯಾಗರಾಜ್ ಹೇಳಿದ್ದಾರೆ.

ಕೃಷಿ ವಸ್ತುಪ್ರದರ್ಶನಕ್ಕೆ ಕೃಷಿ ಸಚಿವ ನರೇಂದ್ರಸ್ವಾಮಿ ಚಾಲನೆ ನೀಡಿದರು. ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಶಿವಲಿಂಗೇಗೌಡ, ಬಸವಂತಪ್ಪ, ರಾಮಲಿಂಗಾರೆಡ್ಡಿ ಹಾಗೂ ಶಾಸಕರಾದ ತನ್ವೀರ್ ಸೇಠ್, ಡಾ. ತಿಮ್ಮಯ್ಯ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ತ್ಯಗರಾಜ್ ಅವರ ಮಳಿಗೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿವಿಧ ಬೆಳೆಗಳ ಬೀಜ ವೈವಿಧ್ಯವನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸಿ, ರೈತರು ಹಾಗೂ ಕೃಷಿ ಆಸಕ್ತರಿಗೆ ಮಾಹಿತಿ ನೀಡಿದ ತ್ಯಾಗರಾಜ್ ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಸ್ಥಳೀಯ ಬೀಜ ತಳಿಗಳ ಸಂರಕ್ಷಣೆ ಮತ್ತು ಕೃಷಿ ಜ್ಞಾನ ವಿನಿಮಯಕ್ಕೆ ಅವರ ಕೊಡುಗೆ ಗಮನಾರ್ಹವಾಗಿದೆ.

In English: Progressive farmer A.M. Tyagaraj of Appegowdanahalli in Sidlaghatta taluk drew attention at the three-day Farmers’ Dasara agriculture exhibition in Mysuru in 2026 by displaying rare seed varieties including vine potato, coloured sorghum, white ragi, black chickpea, black horse gram, leafy vegetable seeds, native fennel seeds and millets. Former minister Tanveer Sait showed interest in the vine potato, and women visitors from Colombia took some; Tyagaraj said he has supplied seeds even abroad and aims to conserve native seed varieties and share farming knowledge. The exhibition was inaugurated by Agriculture Minister Narendraswamy.

For Daily Updates WhatsApp ‘HI’ to 7406303366

error: Content is protected !!
Exit mobile version