Home News ಐಕ್ಯ ಹೋರಾಟ ಸಮಿತಿಯಿಂದ ಉಪವಾಸ ಸತ್ಯಾಗ್ರಹ

ಐಕ್ಯ ಹೋರಾಟ ಸಮಿತಿಯಿಂದ ಉಪವಾಸ ಸತ್ಯಾಗ್ರಹ

0

ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುದಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಖಾಸಗೀಕರಣ, ಮಸೂದೆ ಇವುಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವುದರಿಂದ ಕೃಷಿಕರ ಮೇಲೆ ಮರಣ ಶಾಸನವನ್ನು ಬರೆಯಲು ಹೊರಟಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಆರೋಪಿಸಿದರು.

 ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳನ್ನೊಳಗೊಂಡ ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣೆ ಕಾಯಿದೆಯಿಂದ ದೇಶದಲ್ಲಿರುವ ಹಣವಂತರಿಗೆ ಅನುಕೂಲವಾಗಲಿದೆ. ಬಲಾಡ್ಯರ ಬಳಿಯಿರುವ ಕಪ್ಪು ಹಣವನ್ನು ತಂದು ಭೂಮಿಯ ಮೇಲೆ ಹಾಕಲು ಸರ್ಕಾರ ಅನುವು ಮಾಡಿಕೊಟ್ಟಿದೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿರುವ ಕಪ್ಪುಹಣವನ್ನು ವಶಪಡಿಸಿಕೊಂಡು ಎಲ್ಲಾ ಜನರಿಗೂ ನೀಡುವ ಭರವಸೆ ನೀಡಿದ್ದರಾದರೂ ಇದೀಗ ಅದೇ ಕಪ್ಪು ಹಣವನ್ನು ಕಾರ್ಪೊರೇಟ್ ಸಂಸ್ಥೆಗಳ ಮೂಲಕ ವೈಟ್ ಮನಿ ಮಾಡಲು ಅನುವು ಮಾಡಿಕೊಟ್ಟಿದ್ದಾರೆ ಎಂದರು.

 ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಸಾಮೂಹಿಕ ನಾಯಕತ್ವ) ಯ ಜಿಲ್ಲಾಧ್ಯಕ್ಷ ಬೆಳ್ಳೂಟಿ ಮುನಿಕೆಂಪಣ್ಣ ಮಾತನಾಡಿ, ರೈತರ ಹೆಸರಿನಲ್ಲಿ ಪ್ರಮಾಣ ಮಾಡಿ ಅಧಿಕಾರ ಹಿಡಿದ ಯಡಿಯೂರಪ್ಪನವರು ಇಂದು ರೈತರ ಬೆನ್ನು ಮೂಳೆ ಮುರಿಯುವ ಕೆಲಸಕ್ಕೆ ಮುಂದಾಗುವ ಮೂಲಕ ತಾನು ರೈತರ ಪರ ಅಲ್ಲ, ಕಾರ್ಪೊರೇಟ್ ಪರ ಎಂಬುದನ್ನು ರುಜುವಾತು ಪಡಿಸಿಕೊಂಡಿದ್ದಾರೆ ಎಂದರು.

 ಭೂ ಸುದಾರಣೆ ಕಾಯಿದೆ ಸೇರಿದಂತೆ ಎಪಿಎಂಸಿ ಕಾಯಿದೆ ತಿದ್ದಪಡಿ, ಬೆಸ್ಕಾಂ ಖಾಸಗೀರಣ ಮಾಡಿರುವುದನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಕೆ.ಅರುಂಧತಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

 ಈ ಸಂದರ್ಭದಲ್ಲಿ ರೈತ ಮುಖಂಡರಾದ ಪ್ರತೀಶ್, ಸಿ.ಬಿ.ಶ್ರೀನಿವಾಸ್, ಸತೀಶ್‌ಕುಮಾರ್, ಪ್ರಭಾಕರ್, ವಿ.ಮುನಿಯಪ್ಪ, ಮುದ್ದುರಾಜ್, ಅನಿತ ಹಾಜರಿದ್ದರು.

error: Content is protected !!