Home News ಗಣೇಶನ ಹಬ್ಬವನ್ನು ಸರಳವಾಗಿ ಆಚರಿಸಿ – ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್

ಗಣೇಶನ ಹಬ್ಬವನ್ನು ಸರಳವಾಗಿ ಆಚರಿಸಿ – ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್

0

ಕೋವಿಡ್ ಸೋಂಕಿನ ಭೀತಿಯ ನಡುವೆಯೇ ಗಣೇಶ ಚತುರ್ಥಿ ಬಂದಿದೆ. ಮಣ್ಣಿನಿಂದ ಮಾಡಿರುವ ನೈಸರ್ಗಿಕ ಬಣ್ಣ ಬಳಿದ ನಾಲ್ಕು ಅಡಿಗಿಂತ ಕಡಿಮೆ ಎತ್ತರದ ಗಣೇಶನ ಮೂರ್ತಿಗಳನ್ನು ಸ್ಥಾಪಿಸಬೇಕು ಎಂದು ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ತಿಳಿಸಿದರು.
ಗಣೇಶನ ಹಬ್ಬಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಗುರುವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಹಬ್ಬದ ಆಚರಣೆಗೆ ಅನುಮತಿ ನೀಡಿದ್ದು, ಮೆರವಣಿಗೆ ಮೂಲಕ ಗಣೇಶನ ಮೂರ್ತಿಯನ್ನು ತರುವುದಾಗಲಿ ಅಥವಾ ವಿಸರ್ಜನೆ ಮಾಡುವುದಾಗಲೀ ಸಂಪೂರ್ಣ ನಿಷೇಧ ಮಾಡಲಾಗಿದೆ. ಕೋವಿಡ್ ಮುಂಜಾಗೃತಾ ಕ್ರಮಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು. ಸೋಂಕು ಹರಡುವ ಭೀತಿಯ ಕಾರಣ ಹೆಚ್ಚು ಜನರು ಸೇರುವಂತಿಲ್ಲ. ಗಣೇಶನ ಮೂರ್ತಿಗಳನ್ನು ಸಾರ್ವಜನಿಕವಾಗಿ ಇಡುವವರು ಕಡ್ಡಾಯವಾಗಿ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯಬೇಕು ಮತ್ತು ಮೂರ್ತಿಗಳ ಸುರಕ್ಷತೆಯ ಜವಾಬ್ದಾರಿ ಇಡುವವರದ್ದೇ ಆಗಿರುತ್ತದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಿಲ್ಲ. ಜೊತೆಗೆ ಗಣೇಶ ಕೂರಿಸಿರುವ ಸ್ಥಳದಲ್ಲಿ 20 ಜನಕ್ಕಿಂತ ಹೆಚ್ಚಿನ ಜನ ಸೇರಿದರೆ ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಕೋವಿಡ್-19 ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿರುವವರು ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ಹಾಗೂ ಸ್ವಯಂ ಸೇವಕರನ್ನು ಇಡುವ ಮೂಲಕ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು. ತೀರ್ಥ ಪ್ರಸಾದ ವಿನಿಯೋಗಿಸಬಾರದು. ಏನಾದರೂ ಅಚಾತುರ್ಯ ನಡೆದರೂ ಆಯೋಜಕರೇ ಹೊಣೆಗಾರರಾಗುವರು ಎಂದು ಎಚ್ಚರಿಸಿದರು.
ನಗರಸಭೆ ಆರೋಗ್ಯ ನಿರೀಕ್ಷಕಿ ಶೋಭಾ ಮಾತನಾಡಿ, ಕೋವಿಡ್ ಕಾರಣದಿಂದ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಹಬ್ಬವನ್ನು ಸರಳವಾಗಿ ಆಚರಿಸಿ. ಸ್ವಚ್ಛತೆ, ಸ್ಯಾನಿಟೈಸರ್ ಎಲ್ಲವನ್ನೂ ಆಯೋಜಕರೇ ವ್ಯವಸ್ಥೆ ಮಾಡಿಕೊಳ್ಳಬೇಕು. ಸಾರ್ವಜನಿಕ ಗಣೇಶನ ವಿಸರ್ಜನೆಯನ್ನು ಒಬ್ಬರೋ, ಇಬ್ಬರೋ ಜೊತೆಯಲ್ಲಿ ಹೋಗಿ ವಿಸರ್ಜಿಸಿ ಬರಬೇಕು. ಮನೆಗಳಲ್ಲಿ ಇಡುವವರು ಮನೆಯಲ್ಲಿಯೇ ಒಂದು ಟಬ್ ಅಥವಾ ಬಕೆಟ್ ನಲ್ಲಿ ನೀರಿಟ್ಟು ಅದರಲ್ಲಿ ವಿಸರ್ಜಿಸಿ ಎಂದರು.
ಸಬ್ ಇನ್ಸ್ ಪೆಕ್ಟರ್ ಸಂಗಪ್ಪ ಮೇಟಿ, ನಗರಸಭೆ ಸದಸ್ಯರಾದ ಅನಿಲ್ ಕುಮಾರ್, ಶಬ್ಬೀರ್, ನಾರಾಯಣಸ್ವಾಮಿ ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

error: Content is protected !!