
Sidlaghatta : ಭಕ್ತಿ, ಪರಿಸರ ಕಾಳಜಿ ಹಾಗೂ ಸೌಹಾರ್ದತೆಯನ್ನು ಒಟ್ಟುಗೂಡಿಸಿಕೊಂಡು ನಗರದ ಕೋಟೆ ಶ್ರೀ ವಿನಾಯಕ ಗೆಳೆಯರ ಬಳಗ ಈ ಬಾರಿ ಗಣೇಶೋತ್ಸವವನ್ನು “ಗ್ರೀನ್ ಶಿಡ್ಲಘಟ್ಟ” ಪರಿಕಲ್ಪನೆಯೊಂದಿಗೆ ಆಚರಿಸುತ್ತಿದೆ.
ಕಳೆದ 28 ವರ್ಷಗಳಿಂದ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿರುವ ಬಳಗ, ಈ ಬಾರಿ ಉತ್ಸವವನ್ನು ಕೇವಲ ಧಾರ್ಮಿಕ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ ಊರಿಗೆ ಶಾಶ್ವತವಾಗಿ ಪ್ರಯೋಜನವಾಗುವ ಕಾರ್ಯಕ್ಕೆ ಮುನ್ನುಡಿ ಬರೆಯುವ ಸಂಕಲ್ಪ ಮಾಡಿದೆ. ಉತ್ಸವದಲ್ಲಿ ಮಣ್ಣಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಗುತ್ತಿದೆ. ಹುಂಡಿಯಲ್ಲಿ ಸಂಗ್ರಹವಾಗುವ ಸಂಪೂರ್ಣ ಹಣವನ್ನು ಮರಗಳನ್ನು ಬೆಳೆಸಲು ಮತ್ತು ಊರನ್ನು ಹಸಿರಾಗಿಸಲು ಬಳಸಲು ಬಳಗ ನಿರ್ಧರಿಸಿದೆ.
“ನಮ್ಮ ಭಕ್ತಿ–ನಮ್ಮ ಮರಗಳು–ನಮ್ಮ ಹಸಿರು ಶಿಡ್ಲಘಟ್ಟ” ಎಂಬ ಸಂದೇಶದೊಂದಿಗೆ ಪರಿಸರ ಸಂರಕ್ಷಣೆಯತ್ತ ಜನರ ಗಮನ ಸೆಳೆಯುವುದು ಬಳಗದ ಉದ್ದೇಶವಾಗಿದೆ.
ಸೌಹಾರ್ದತೆಗೆ ಮತ್ತೊಂದು ಹೆಜ್ಜೆ
ಉತ್ಸವದ ಮತ್ತೊಂದು ವಿಶೇಷವೆಂದರೆ, ಮುಸ್ಲಿಂ ಸಮುದಾಯದ ಯುವಕರು ಮತ್ತು ಹಿರಿಯರು ಸ್ವಯಂಪ್ರೇರಣೆಯಿಂದ ಗಣೇಶೋತ್ಸವಕ್ಕೆ ದೇಣಿಗೆ ನೀಡಿರುವುದು. ಅಲ್ಲದೆ, ಪೂಜೆ ಹಾಗೂ ಪ್ರಸಾದ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿ ಸಹಕಾರ ನೀಡಿದ್ದಾರೆ. ಧರ್ಮದ ಭಿನ್ನತೆಗಳನ್ನು ಮೀರಿ ಜನರು ಒಗ್ಗಟ್ಟಾಗಿ ಪರಿಸರ ಸಂರಕ್ಷಣೆಗೆ ಕೈಜೋಡಿಸಿರುವುದು ಈ ಬಾರಿಯ ಗಣೇಶೋತ್ಸವದ ವಿಶೇಷತೆಯಾಗಿದೆ.
“ಪ್ರತಿವರ್ಷ ಭಕ್ತಿಯಿಂದ ಗಣೇಶೋತ್ಸವ ಆಚರಿಸುತ್ತಿದ್ದೇವೆ. ಈ ಬಾರಿ ಉತ್ಸವದ ಮೂಲಕ ನಮ್ಮ ಊರಿಗೆ ಶಾಶ್ವತವಾದ ಒಳ್ಳೆಯ ಕೆಲಸ ಮಾಡಬೇಕು ಎಂಬ ಆಲೋಚನೆ ಮೂಡಿತು. ಹೆಚ್ಚು ಮರಗಳು ಬೆಳೆಯಬೇಕು, ಹಸಿರು ಹೆಚ್ಚಬೇಕು ಎಂಬ ಉದ್ದೇಶದಿಂದ “ಗ್ರೀನ್ ಶಿಡ್ಲಘಟ್ಟ” ಪರಿಕಲ್ಪನೆ ರೂಪಿಸಿಕೊಂಡಿದ್ದೇವೆ. ಮುಸ್ಲಿಂ ಸ್ನೇಹಿತರು ಸ್ವಯಂಪ್ರೇರಣೆಯಿಂದ ದೇಣಿಗೆ ನೀಡಿ, ಪೂಜೆ ಮತ್ತು ಪ್ರಸಾದದಲ್ಲೂ ಭಾಗವಹಿಸಿರುವುದು ನಮ್ಮೆಲ್ಲರ ಸಂತೋಷಕ್ಕೆ ಕಾರಣವಾಗಿದೆ. ಭಕ್ತಿ, ಪರಿಸರ ಮತ್ತು ಸೌಹಾರ್ದತೆ ಈ ಮೂರನ್ನೂ ಒಂದೇ ವೇದಿಕೆಯಲ್ಲಿ ತರುವುದೇ ನಮ್ಮ ಉದ್ದೇಶ,” ಎಂದು ಕೋಟೆ ಶ್ರೀ ವಿನಾಯಕ ಗೆಳೆಯರ ಬಳಗದ ಸದಸ್ಯರು ತಿಳಿಸಿದ್ದಾರೆ.
ಉತ್ಸವ ಮುಗಿದ ನಂತರವೂ “ಗ್ರೀನ್ ಶಿಡ್ಲಘಟ್ಟ” ಪರಿಕಲ್ಪನೆಯನ್ನು ಮುಂದುವರಿಸಿ, ಮರಗಳನ್ನು ಬೆಳೆಸುವ ಕಾರ್ಯಕ್ಕೆ ಒತ್ತು ನೀಡಲು ಬಳಗ ಉದ್ದೇಶಿಸಿದೆ.
In English: The Kote Sri Vinayaka Geleyara Balaga in Sidlaghatta is marking this year Ganeshotsava under a “Green Sidlaghatta” theme, installing an eco-friendly clay idol and pledging to use all hundi (donation box) collections to plant trees rather than for other festival expenses. In a gesture of communal harmony, youth and elders from the local Muslim community voluntarily contributed to the celebrations and took part in the puja and prasada distribution. Organisers say they plan to continue the tree-planting drive even after the festival ends.
ಇಂತಹುದೇ ಮತ್ತೊಂದು ಪ್ರಯತ್ನದ ಬಗ್ಗೆ ಈ ಹಿಂದೆ ವರದಿ ಮಾಡಿದ ಪರಿಸರ ಸ್ನೇಹಿ ಗಣೇಶ ಮೂರ್ತಿ ಕುರಿತ ವರದಿಯನ್ನೂ ಓದಿ.