Home News ಗಂಜಿಗುಂಟೆ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಅಪರೂಪದ ಶಾಸನ

ಗಂಜಿಗುಂಟೆ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಅಪರೂಪದ ಶಾಸನ

0
Ganjigunte Chandramouleshwara Temple ancient Scriptures

Ganjigunte, sidlaghatta : ಸಮಯವನ್ನು ಕೇವಲ ಅಂಕಿ-ಅಂಶ ಅಥವಾ ಕ್ಯಾಲೆಂಡರ್ ದಿನಾಂಕಗಳಾಗಿ ನೋಡುವ ಬದಲಿಗೆ, ಧಾರ್ಮಿಕ, ಸಾಂಸ್ಕೃತಿಕ ಅಥವಾ ಆಧ್ಯಾತ್ಮಿಕ ಸಂಕೇತಗಳ ಆಧಾರದ ಮೇಲೆ ಅಳೆಯುವ ವಿಧಾನವಾದ ಸಾಂಕೇತಿಕ ಕಾಲಗಣನೆ ಹೊಂದಿರುವಂತಹ ಅವಿಭಾಜ್ಯ ಜಿಲ್ಲೆಗಳ ಏಕೈಕ ಶಾಸನವಿದು ಎಂದು ಶಾಸನತಜ್ಞ ಕೆ.ಧನಪಾಲ್ ತಿಳಿಸಿದರು.

ತಾಲ್ಲೂಕಿನ ಗಂಜಿಗುಂಟೆ ಗ್ರಾಮದ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಭಾನುವಾರ ಕರ್ನಾಟಕ ಇತಿಹಾಸ ಅಕಾಡೆಮಿಯ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮದಡಿಯಲ್ಲಿ ದೇವಸ್ಥಾನದ ಒಳಬಾಗದ ಮೇಲ್ಚಾವಣೆಯ ತೊಲೆಯ ಮೇಲೆ ಸಂಸ್ಕೃತ ಭಾಷೆಯ ಕನ್ನಡ ಲಿಪಿಯ ಶಾಸನವನ್ನು ವಿವರಿಸಿ ಅವರು ಮಾತನಾಡಿದರು.

ಗಂಜಿಗುಂಟೆ ಗ್ರಾಮದ ಚಂದ್ರಮೌಳೀಶ್ವರ ದೇವಸ್ಥಾನದ ತಾಳವಾರದ ಮೇಲ್ಚಾವಣೆಯ ಮುಖಾಸನ ಕಲ್ಲಿನಲ್ಲಿ ಕೆತ್ತಿರುವ ಶಾಸನದ ಸಾರಾಂಶ ಹೀಗಿದೆ :

ಶಕವರ್ಷ (ಬಾಣ ಗೋ ರಸ ಸೀತಾಂಶು) ಅಂದರೆ ಶಕ 1695, ವಿಜಯ ಸಂತ್ಸರ, ಕಾರ್ತಿಕ ಶುದ್ಧ ದಶಮಿ ಸೋಮವಾರದಂದು (ಅಂದರೆ ಕ್ರಿ.ಶ. 1773, ಅಕ್ಟೋಬರ್ 25 ಸೋಮವಾರ) ಗಂಜಿಗುಂಟೆ ಗ್ರಾಮ ನಿವಾಸಿ ಭಾರದ್ವಾಜ ಗೋತ್ರ ಅಶ್ವಲಾಯನ ಸೂತ್ರ ಸಕಲ ವೇದಶಾಸ್ತ್ರ ಪಾರಂಗತರಾದ ಪುರೋಹಿತ ಕೃಷ್ಣಪಂಡಿತರ ಮರಿಮೊಮ್ಮಗನೂ ಸುಬ್ಬಾಪಂಡಿತರ ಮೊಮ್ಮಗನೂ ವೆಂಕಟಕೃಷ್ಣಶಾಸ್ತ್ರೀ ಮತ್ತು ಅಕ್ಕಾಂಬ ದಂಪತಿಗಳ ಮಗನಾದ ಮಹಾಪಂಡಿತನೂ ನುರಿತ ಕವಿಯೂ ಆದ ರಾಮಕೃಷ್ಣಶಾಸ್ತ್ರೀಯು ಅಚಂದ್ರಾರ್ಕವಾಗಿ ಶಾಶ್ವತ ಸುಖ, ಮೋಕ್ಷ ಮತ್ತು ಸಂಪತ್ತುಗಳನ್ನು ಉಂಟಾಗಲಿ ಎಂದು ದೇವಾಲಯ ಮತ್ತು ಮಂಟಪವನ್ನು ಮಾಡಿಸಿ, ಚಂದ್ರಮೌಳೇಶ್ವರ ದೇವರು, ದುರ್ಗಾ, ಗಣೇಶ, ಚಂಡಿಕೇಶ್ವರ, ಭೈರವ, ವೀರಭದ್ರ ಮತ್ತು ನಂದಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರು ಎಂಬ ವಿವರವಿದೆ ಎಂದು ಹೇಳಿದರು.

ಈ ಶಾಸನದಲ್ಲಿ ನಾಲ್ಕು ತಲೆಮಾರುಗಳ ಹೆಸರಿದ್ದು, ಆಗಿನ ಕಾಲದಲ್ಲಿ ಗಂಜಿಗುಂಟೆಯು ವಿದ್ವಾಂಸರಿದ್ದ ಸ್ಥಳ ಎಂಬುದು ಇದರಿಂದ ತಿಳಿದುಬರುತ್ತದೆ. ಈ ಸಂಗತಿಯು ಗ್ರಾಮಸ್ಥರು ಹೆಮ್ಮೆಪಡುವಂತಹುದಾಗಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಶಾಸನತಜ್ಞರಾದ ಕೆ.ಧನಪಾಲ್ ಮತ್ತು ಎ.ಎಂ.ತ್ಯಾಗರಾಜ್ ಅವರು ಇತಿಹಾಸ ಅಕಾಡೆಮಿ ವತಿಯಿಂದ ಶಾಸನದ ವಿವರ, ಪಠ್ಯ ಮತ್ತು ಸಾರಾಂಶವಿರುವ ಫಲಕವನ್ನು ಗ್ರಾಮಸ್ಥರಿಗೆ ನೀಡಿದರು.

ಶಾಸನತಜ್ಞರಾದ ಕೆ.ಧನಪಾಲ್, ಎ.ಎಂ.ತ್ಯಾಗರಾಜ್, ಸೂರ್ಯಪ್ರಕಾಶ್ ಶಾಸ್ತ್ರಿ, ಬಾಲುಚಂದ್ರಶೇಖರ್, ಅರುಣ್, ಜ್ಞಾನೇಶ್ವರಿ, ಅಶ್ವಿನಿ, ಶಶಿಕುಮಾರನಾಯ್ಕ, ಅರ್ಚಕರಾದ ಜಿ.ಎಸ್.ಸುಧಾಕರ, ಅನಂತಕೃಷ್ಣ, ಜಿ.ಆರ್.ಎಸ್.ಸಂಸ್ಕೃತ ಮತ್ತು ವೇದ ಪಾಠಶಾಲಾ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version