
Sidlaghatta : ತಾಲ್ಲೂಕು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿರುವ ಬೆನ್ನಲ್ಲೇ ಗ್ರಾಮ ಪಂಚಾಯಿತಿಗಳಿಂದ ತೆರಿಗೆ ಬಾಕಿ ಪಾವತಿಸುವಂತೆ ನೋಟಿಸ್ ನೀಡಿ, ಪಾವತಿಸದಿದ್ದರೆ ಜಪ್ತಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
In English: Days after the state government declared Sidlaghatta among 101 drought-hit taluks for the 2026 kharif season, Gram Panchayats in Malamachanahalli, Bashettahalli and Jangamakote have sent farmers tax-due notices warning of seizure action under the Karnataka Gram Swaraj and Panchayat Raj Act, prompting objections from farmer leader Bhaktarahalli Byregowda, who asked what authority permits seizure action against farmers already reeling from drought conditions.
ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ, ಬಶೆಟ್ಟಹಳ್ಳಿ, ಜಂಗಮಕೋಟೆ ಗ್ರಾಮ ಪಂಚಾಯಿತಿ ಹೆಸರಿನಲ್ಲಿ ಹೊರಡಿಸಿರುವ ತೆರಿಗೆ ನೋಟಿಸ್ ಗಳಲ್ಲಿ 2026–27ನೇ ಸಾಲಿನ ವಿವಿಧ ತೆರಿಗೆ ಹಾಗೂ ಬಾಕಿ ಮೊತ್ತಗಳನ್ನು ಪಾವತಿಸುವಂತೆ ಸೂಚಿಸಲಾಗಿದೆ.
ನೋಟಿಸ್ ಗಳಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ರಾಜ್ ಕಾಯ್ದೆ, 1993ರ 200(1)ನೇ ಕಲಂ ಉಲ್ಲೇಖಿಸಿ ತೆರಿಗೆ ಪಾವತಿಸುವಂತೆ ಸೂಚಿಸಲಾಗಿದ್ದು, ನಿಗದಿತ ಅವಧಿಯಲ್ಲಿ ಪಾವತಿಸದಿದ್ದರೆ ಕಾಯ್ದೆಯ 200(4)ನೇ ಕಲಂ ಅಡಿ ಜಪ್ತಿ ಸೇರಿದಂತೆ ವಸೂಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, “ಒಂದೆಡೆ ಸರ್ಕಾರವೇ ಶಿಡ್ಲಘಟ್ಟ ಸೇರಿದಂತೆ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಇನ್ನೊಂದೆಡೆ ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗಳಿಂದ ತೆರಿಗೆ ಬಾಕಿ ವಸೂಲಿಗೆ ಜಪ್ತಿ ಎಚ್ಚರಿಕೆ ನೀಡಲಾಗುತ್ತಿದೆ. ರೈತರ ಮೇಲೆ ಇಂತಹ ಕ್ರಮ ಕೈಗೊಳ್ಳಲು ಅಧಿಕಾರ ಕೊಟ್ಟವರು ಯಾರು?” ಎಂದು ಪ್ರಶ್ನಿಸಿದ್ದಾರೆ.
“ಬರದಿಂದ ಬೆಳೆ, ನೀರು, ಜಾನುವಾರು ಸಾಕಣೆ ಸೇರಿದಂತೆ ಗ್ರಾಮೀಣ ಬದುಕೇ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಜನರಿಗೆ ಪರಿಹಾರ ಹಾಗೂ ನೆರವು ನೀಡಬೇಕಾದ ಸ್ಥಳೀಯ ಸಂಸ್ಥೆಗಳು ಜಪ್ತಿ ನೋಟಿಸ್ ನೀಡುತ್ತಿರುವುದು ಎಷ್ಟು ಸಮಂಜಸ?” ಎಂದು ಅವರು ಪ್ರಶ್ನಿಸಿದ್ದಾರೆ.
ಕಾಯ್ದೆಯಲ್ಲಿ ಏನಿದೆ?
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ 200ನೇ ಕಲಂ ಗ್ರಾಮ ಪಂಚಾಯಿತಿಗೆ ತೆರಿಗೆ ಮತ್ತು ಇತರೆ ಬಾಕಿ ವಸೂಲಿ ಮಾಡುವ ಪ್ರಕ್ರಿಯೆಯನ್ನು ವಿವರಿಸುತ್ತದೆ. ಬಾಕಿ ಮೊತ್ತಕ್ಕೆ ಮೊದಲು ಬಿಲ್ ನೀಡಬೇಕು; ಪಾವತಿಯಾಗದಿದ್ದರೆ ನಿಗದಿತ ನಮೂನೆಯಲ್ಲಿ ಬೇಡಿಕೆ ನೋಟಿಸ್ ನೀಡಬೇಕು. ಬೇಡಿಕೆ ನೋಟಿಸ್ ನೀಡಿದ ಬಳಿಕವೂ 30 ದಿನಗಳಲ್ಲಿ ಮೊತ್ತ ಪಾವತಿಯಾಗದಿದ್ದರೆ, ಬಾಕಿ ಮೊತ್ತದ ಮೇಲೆ ಶೇ 10ರಷ್ಟು ದಂಡದೊಂದಿಗೆ ಚರಾಸ್ತಿಯನ್ನು ಜಪ್ತಿ ಮಾಡಿ ಮಾರಾಟ ಮಾಡುವ ಮೂಲಕ ವಸೂಲಿ ಮಾಡಲು ಗ್ರಾಮ ಪಂಚಾಯಿತಿಗೆ ಅವಕಾಶವಿದೆ ಎಂದು ಕಾಯ್ದೆ ಹೇಳುತ್ತದೆ.
ಹೀಗಾಗಿ, ಈಗ ರೈತರಿಗೆ ಕೊಟ್ಟಿರುವ ನೋಟಿಸ್ ಗಳಲ್ಲಿ 15 ದಿನಗಳೊಳಗೆ ಬಾಕಿ ಪಾವತಿಸಬೇಕು ಎಂದು ಗಡುವು ನೀಡಿರುವುದು ಮತ್ತು ನಂತರ 200(4)ರ ಅಡಿ ಜಪ್ತಿ ಕ್ರಮದ ಉಲ್ಲೇಖ ಮಾಡಿರುವುದರ ಬಗ್ಗೆ ಕೂಡ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಾಗಿದೆ. 15 ದಿನಗಳ ಗಡುವು ಪ್ರಾಥಮಿಕ ಬಿಲ್ಗೆ ಸಂಬಂಧಿಸಿದ್ದೇ ಅಥವಾ ಕಾಯ್ದೆಯ 200(2)ರಡಿ ನೀಡಬೇಕಾದ ಬೇಡಿಕೆ ನೋಟಿಸ್ ಗೆ ಸಂಬಂಧಿಸಿದ್ದೇ ಎಂಬುದನ್ನು ಪಂಚಾಯಿತಿ ಸ್ಪಷ್ಟಪಡಿಸಬೇಕಿದೆ ಎಂದು ಭೈರೇಗೌಡ ತಿಳಿಸಿದರು.
101 ತಾಲೂಕುಗಳ ಪಟ್ಟಿಯಲ್ಲಿ ಶಿಡ್ಲಘಟ್ಟ:
ರಾಜ್ಯ ಸರ್ಕಾರದ ಆದೇಶದಂತೆ 2026ರ ಖಾರಿಫ್ ಹಂಗಾಮಿಗೆ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಈ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟವೂ ಸೇರಿದೆ. ಈ ಹಿನ್ನೆಲೆಯಲ್ಲಿ ಬರಪೀಡಿತ ತಾಲ್ಲೂಕಿನಲ್ಲಿ ತೆರಿಗೆ ಬಾಕಿ ವಸೂಲಿಗೆ ಜಪ್ತಿ ಎಚ್ಚರಿಕೆ ನೀಡುವ ಮೊದಲು ರೈತರ ಆರ್ಥಿಕ ಸಂಕಷ್ಟವನ್ನು ಪರಿಗಣಿಸಬೇಕು ಎಂದು ಭಕ್ತರಹಳ್ಳಿ ಬೈರೇಗೌಡ ಆಗ್ರಹಿಸಿದ್ದಾರೆ.
“ತೆರಿಗೆ ವಸೂಲಿ ಕಾನೂನುಬದ್ಧ ಪ್ರಕ್ರಿಯೆಯಾಗಿದ್ದರೆ, ಅದನ್ನು ಪ್ರಶ್ನಿಸುವುದಿಲ್ಲ. ಆದರೆ ಬರಪೀಡಿತ ಪ್ರದೇಶದಲ್ಲಿ ಜನರ ಸಂಕಷ್ಟದ ಸಂದರ್ಭದಲ್ಲಿ ಮಾನವೀಯ ದೃಷ್ಟಿಕೋನದಿಂದ ಕ್ರಮ ಕೈಗೊಳ್ಳಬೇಕು. ಜಪ್ತಿ ಮಾಡುವ ಅಧಿಕಾರವನ್ನು ಯಾವ ಆದೇಶದ ಮೇರೆಗೆ ಬಳಸಲಾಗುತ್ತಿದೆ ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಬೇಕು. ಸರ್ಕಾರ ಬರ ಪರಿಹಾರದ ಬಗ್ಗೆ ಮಾತನಾಡುತ್ತಿರುವಾಗ, ಸ್ಥಳೀಯ ಸಂಸ್ಥೆಗಳು ಜಪ್ತಿ ನೋಟಿಸ್ ನೀಡುತ್ತಿರುವುದು ಯಾವ ಸಂದೇಶ ನೀಡುತ್ತದೆ?” ಎಂದು ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ತಾಲ್ಲೂಕು ಆಡಳಿತ ಸ್ಪಷ್ಟನೆ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.