Home News ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ

0

ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸೂಕ್ತ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶಿವಕುಮಾರ್ ತಿಳಿಸಿದರು.
ನಗರದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ಕೊರೊನಾ ಕುರಿತಾದ ಜಾಗೃತಿ ಮೂಡಿಸುವ “ಕೋವಿಡ್ 19 ಮಾಹಿತಿ ಪತ್ರ” ವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕೊರೊನಾ ವೈರಾಣು ಎಲ್ಲಿರುತ್ತದೆ ಎಂಬುದು ನಮಗೆ ಕಾಣುವುದಿಲ್ಲ. ಹಾಗಾಗಿ ನಮ್ಮೆಲ್ಲರ ಆರೋಗ್ಯಕ್ಕಾಗಿ ಮುನ್ನೆಚ್ಚರಿಕೆ ಅಗತ್ಯ. ಈ ಕುರಿತಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಐದು ಸಾವಿರ ಭಿತ್ತಿಪತ್ರಗಳ ಮೂಲಕ ತಾಲ್ಲೂಕಿನಾದ್ಯಂತ ಅರಿವು ಮೂಡಿಸುತ್ತಿರುವುದು ಅಭಿನಂದನೀಯ ಸಂಗತಿ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಶಾಖೆಯ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿ, ಕೊರೊನಾ ವೈರಾಣುವನ್ನು ಆಂತರಿಕವಾಗಿ ಮತ್ತು ಬಹಿರಂಗವಾಗಿ ಹಿಮ್ಮೆಟ್ಟಿಸಬೇಕಿದೆ. ಆಂತರಿಕವೆಂದರೆ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದು. ಬಹಿರಂಗವೆಂದರೆ, ಮಾಸ್ಕ್ ಧರಿಸುವುದು, ಸ್ವಚ್ಛತೆ, ಅಂತರ ಕಾಯ್ದುಕೊಳ್ಳುವುದು ಮುಂತಾದ ಮುನ್ನೆಚ್ಚರಿಕೆಗಳು. ಈ ನಿಟ್ಟಿನಲ್ಲಿ ಹತ್ತು ಲಕ್ಷ “ಕೋವಿಡ್ 19 ಮಾಹಿತಿ ಪತ್ರ” ವನ್ನು ರಾಜ್ಯದಾದ್ಯಂತ ಹಂಚಲಾಗುತ್ತಿದೆ ಎಂದರು.
ಜನಜಾಗೃತಿ ವೇದಿಕೆ ಸದಸ್ಯ ಎ.ಎಂ.ತ್ಯಾಗರಾಜ್, ಕಾರ್ಯಕರ್ತರು ಕಿರಣ್, ಚೇತನ್, ಸುಮ, ಜ್ಯೋತಿ, ಲಕ್ಷ್ಮಿ ಹಾಜರಿದ್ದರು.

error: Content is protected !!