ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು 24 ಕೋಟಿ 75 ಲಕ್ಷ ರೂಗಳ ವೆಚ್ಚದಲ್ಲಿ ಇಂದಿರಾಗಾಂಧಿ ವಸತಿಶಾಲೆಯನ್ನು ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಕೆ.ಸಿ.ರಾಜಕಾಂತ್ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ನಿರ್ಮಿಸುತ್ತಿರುವ ಇಂದಿರಾಗಾಂಧಿ ವಸತಿ ಶಾಲೆಯ ಕಾಮಗಾರಿಯನ್ನು ಪರಿಶೀಲಿಸಿ ಅವರು ಮಾತನಾಡಿದರು. ಜಾತಿ ಮತ ಭೇದ ಇಲ್ಲದೇ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಒದಗಿಸಬೇಕೆಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳು ಮತ್ತು ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿನಿಲಯಗಳನ್ನು ನಿರ್ಮಿಸಲಾಗುತ್ತಿದ್ದು ಪೋಷಕರು ತಮ್ಮ ತಮ್ಮ ಮಕ್ಕಳನ್ನು ಈ ವಸತಿ ಶಾಲೆಗಳಿಗೆ ಸೇರಿಸಿ ಅವರ ಭವಿಷ್ಯ ಉಜ್ವಲಗೊಳಿಸಬೇಕೆಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ರಾಜ್ಯದಲ್ಲಿ ಅಗ್ರಸ್ಥಾನ ಹೊಂದಿದೆ. ಜಿಲ್ಲೆಯ 6 ವಸತಿಯುತ ಶಾಲೆಗಳು ಮತ್ತು 30 ಸರ್ಕಾರಿ ವಿದ್ಯಾರ್ಥಿನಿಲಯಗಳು ಶೇಕಡ ನೂರರಷ್ಟು ಫಲಿತಾಂಶ ದಾಖಲಿಸಿವೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತೇವೆ. ಜೊತೆಗೆ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಎಲ್ಲಾ ರೀತಿಯ ನೆರವು ಕಲ್ಪಿಸುತ್ತೇವೆ ಎಂದರು.
ಕೊರೊನಾ ಸೋಂಕು ನಿಯಂತ್ರಿಸಲು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳನ್ನು ಬಳಕೆ ಮಾಡುತ್ತಿದ್ದೇವೆ. ನಾಗರಿಕರು ತ್ವರಿತವಾಗಿ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಕೆಲವೊಂದು ವಸತಿಶಾಲೆಗಳನ್ನು ಕೋವಿಡ್ ಕೇಂದ್ರಗಳಾಗಿ ಪರಿವರ್ತಿಸಿದ್ದೇವೆ. ಜಿಲ್ಲಾಡಳಿತಕ್ಕೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದ್ದೇವೆ ಎಂದರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ತೇಜಾನಂದ್‌ರೆಡ್ಡಿ ಮಾತನಾಡಿ, ರಾಜ್ಯದಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿರುವ ಹಾಸ್ಟೆಲ್ ವಿದ್ಯಾರ್ಥಿಗಳು ಉತ್ತಮವಾಗಿ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿನಿಲಯದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಸೋಪ್‌ಕಿಟ್ಸ್-ನೋಟ್ ಬುಕ್ಸ್, ಶೂ ಸಾಕ್ಸ್, 3 ಜೊತೆ ಸಮವಸ್ತ್ರ ನೀಡಲಾಗುತ್ತದೆ. ವಸತಿಯುತ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ಸಹ ಒದಗಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಕಂಪ್ಯೂಟರ್-ಪ್ರಯೋಗಾಲಯ ಮತ್ತು ಗ್ರಂಥಾಲಯದ ವ್ಯವಸ್ಥೆ ಸಹ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿಯ ಸದಸ್ಯೆ ಕಮಲಮ್ಮ, ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ಶೇಷಾದ್ರಿ, ನಾರಾಯಣಸ್ವಾಮಿ ಹಾಜರಿದ್ದರು.