Home News 65 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

65 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

0

ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆ. ಕನ್ನಡ ನಾಡು ಜಗತ್ತಿನ ಪ್ರಜಾತಂತ್ರ ವ್ಯವಸ್ಥೆಗೆ ಬಹುದೊಡ್ಡ ಕೊಡುಗೆ ನೀಡಿದೆ ಎಂಬುದು ಸಹ ಗಮನಾರ್ಹ. ಪ್ರಜಾಪ್ರಭುತ್ವ ವ್ಯವಸ್ಥೆ ಮೊದಲು ಸ್ಥಾಪಿತಗೊಂಡಿದ್ದೇ  ಕರ್ನಾಟಕದಲ್ಲಿ ಎಂದು ತಹಶೀಲ್ದಾರ್ ಕೆ.ಅರುಂಧತಿ ತಿಳಿಸಿದರು.

 ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ನಾಡ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 65 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ಬಸವಣ್ಣನರ ಕಾಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೂರ್ತ ರೂಪ ದೊರೆಯಿತು. ಬಸವಣ್ಣನ ಕಾಲದ ಚಿಂತಕರ ಚಾವಡಿ ಮೂಲಕ ಪ್ರಜಾತಂತ್ರ ವ್ಯವಸ್ಥೆಯ ಬೀಜ ಬಿತ್ತಲಾಯಿತು. ಯಾವುದೇ ಸಮಸ್ಯೆಗೆ ಚರ್ಚೆ, ಸಂವಾದದ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎನ್ನುವುದಕ್ಕೆ ಆಗಲೇ ಸ್ಪಷ್ಟ  ರೂಪ ದೊರೆಯಿತು. ಬಳಿಕ ಮೈಸೂರಿನ ಅರಸರ ಕಾಲದ ಪ್ರಜಾಪ್ರತಿನಿಧಿ ಸಭೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪುಷ್ಠಿ ನೀಡಿತು. ಇಂತಹ ಭವ್ಯ ನಾಡು ಕನ್ನಡ ನಾಡು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದರು.

 ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿ, ಭಾಷೆ ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ. ಅದು ನಮ್ಮ ನೆಲದ ಹಾಗೂ ಅನೇಕ ತಲೆಮಾರುಗಳ ಸಂಸ್ಕೃತಿಯನ್ನು ಜತನದಿಂದ ಕಾಪಿಟ್ಟುಕೊಂಡು ಬಂದ ಮಾಧ್ಯಮ. ಆದ್ದರಿಂದಲೇ ಭಾಷೆಗೂ ನೆಲದ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ. ಇಂತಹದೊಂದು ಅನನ್ಯ  ಬಂಧವಿಲ್ಲದೇ ಹೋದಲ್ಲಿ ಭಾಷೆ ಮಾತನಾಡುವ ಸಂಕೇತವಾಗಿ ಮಾತ್ರ ಉಳಿದು ಜನಮಾನಸದಿಂದ ಬಹುಬೇಗ ಮರೆಯಾಗುವ ಅಪಾಯ ಇರುತ್ತದೆ. ಕನ್ನಡ ಶಾಲೆಗಳಲ್ಲಿ ಮಕ್ಕಳನ್ನು ಓದಿಸಿ, ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಿ ಎಂದು ಹೇಳಿದರು.

 ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ನವೆಂಬರ್ ತಿಂಗಳಿಗೆ ಕನ್ನಡಿಗರ ಭಾವಕೋಶದಲ್ಲಿ ವಿಶಿಷ್ಠ ಸ್ಥಾನವಿದೆ. ನಾಡಾಭಿಮಾನಿಗಳಿಗೆ ನವೆಂಬರ್ ಎಂದರೆ ಕನ್ನಡ ಮಾಸ. ಕನ್ನಡಾಭಿಮಾನ ಬಹಿರಂಗವಾಗಿ ಪ್ರಕಟವಾಗುವ ತಿಂಗಳಿದು. ಎಲ್ಲೆಲ್ಲೂ ಕನ್ನಡ ಬಾವುಟಗಳು ಹಾರಾಡುತ್ತವೆ. ಕನ್ನಡ ಕಾಣುತ್ತದೆ ಆದರೆ ಬಹಿರಂಗದ ಬದಲು ಅಂತರಂಗವಾಗಿ  ಕನ್ನಡ ಡಿಂಡಿಮ ಮೊಳಗಬೇಕಾಗಿದೆ. ರಾಜ್ಯೋತ್ಸವ ಘೋಷಣೆ-ಭಾಷಣಗಳಿಗೇ ಸೀಮಿತವಾಗದೇ ಕನ್ನಡ ಜಾಗೃತಿಗೆ ವೇದಿಕೆ ಆಗಬೇಕಾಗಿದೆ ಎಂದರು.

 ಕಾರ್ಯಕ್ರಮಕ್ಕೆ ಮುನ್ನ ಸಲ್ಲಾಪುರಮ್ಮ ದೇವಾಲಯದ ಬಳಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ನಾಡು ನುಡಿಗೆ ಸೇವೆ ಸಲ್ಲಿಸಿದ ಸಾಧಕರಾದ ನಾಡೋಜ ಮುನಿವೆಂಕಟಪ್ಪ (ಕಲಾ ಮಾಧ್ಯಮ), ಡಿ.ಜಿ.ಮಲ್ಲಿಕಾರ್ಜುನ (ಸಾಹಿತ್ಯ) ಮತ್ತು ಬಿ.ಆರ್.ಅನಂತಕೃಷ್ಣ (ಕನ್ನಡ ಸೇವೆ) ಅವರನ್ನು ಸನ್ಮಾನಿಸಲಾಯಿತು. ಜಿಲ್ಲೆಯಲ್ಲಿಯೇ ಅತಿಹೆಚ್ಚು ಕಾರ್ಯಕ್ರಮಗಳನ್ನು ನಡೆಸಿರುವ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಅವರಿಗೆ ತಾಲ್ಲೂಕು ಆಡಳಿತದಿಮ್ದ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.

 ತಾಲ್ಲೂಕು ವೈದ್ಯಾಧಿಕಾರಿ ವೆಂಕಟೇಶಮೂರ್ತಿ, ಶಿಕ್ಷಕ ಕೆಂಪಣ್ಣ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ, ಪ್ರತೀಶ್, ಮುನಿಕೆಂಪಣ್ಣ, ರೈತ ಮುಖಂಡರು, ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು, ಕಸಾಪ ಪದಾಧಿಕಾರಿಗಳು ಹಾಜರಿದ್ದರು.

error: Content is protected !!