Home News ರಾಷ್ಟ್ರೀಕೃತ ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಲು ಕಸಾಪ ಒತ್ತಾಯ

ರಾಷ್ಟ್ರೀಕೃತ ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಲು ಕಸಾಪ ಒತ್ತಾಯ

0

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಐಪಿಬಿಎಸ್ ಮೂಲಕ ನಡೆಸುವ ಪರೀಕ್ಷೆ ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲಿ ನಡೆಸುವುದರಿಂದ ಪ್ರದೇಶಿಕ ಭಾಷಿಗರಿಗೆ ಅನ್ಯಾಯವಾಗುತ್ತಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ತಿಳಿಸಿದರು.

ರಾಷ್ಟ್ರೀಕೃತ ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸುವಂತೆ ಒತ್ತಾಯಿಸಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳೊಂದಿಗೆ ತಹಶೀಲ್ದಾರ್ ಕೆ.ಅರುಂಧತಿ ಅವರನ್ನು ಶನಿವಾರ ಭೇಟಿ ಮಾಡಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.

ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದಾಗಿ 2019 ರಲ್ಲಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತಾದರೂ 2020-21 ನೇ ಸಾಲಿನ ಪರೀಕ್ಷೆಗಳನ್ನು ಆಂಗ್ಲ ಹಾಗೂ ಹಿಂದಿ ಭಾಷೆಯಲ್ಲಿ ನಡೆಸಲು ಸಿದ್ದವಾಗುವ ಮೂಲಕ ಕೇಂದ್ರ ಸರ್ಕಾರ ತಮ್ಮದೇ ನಿಲುವಿಗೆ ತದ್ವಿರುದ್ದವಾಗಿ ವರ್ತಿಸುತ್ತಿದೆ.

ಇದರಿಂದ ಸಂವಿಧಾನದಲ್ಲಿ ಸಮಾನ ಸ್ಥಾನಮಾನ ಹೊಂದಿರುವ ಕನ್ನಡ ಭಾಷೆ ಸೇರಿದಂತೆ ಪ್ರಾದೇಶಿಕ ಭಾಷಿಗರಿಗೆ ಅನ್ಯಾಯವಾಗಲಿದೆ. ಕೇವಲ ಹಿಂದಿ ಹಾಗೂ ಆಂಗ್ಲ ಭಾಷೆ ಬರುವವರು ಮಾತ್ರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನೇಮಕವಾಗುತ್ತಿದ್ದು ಉಳಿದ ಭಾಷಿಕರಿಗೆ ಅನ್ಯಾಯವಾಗುತ್ತಿದೆ.

ಕೂಡಲೇ ಕರ್ನಾಟಕದ ಮುಖ್ಯಮಂತ್ರಿಗಳು ಈ ವಿಷಯವಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಕೆ.ಅರುಂಧತಿ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಎಸ್.ಸತೀಶ್, ಪದಾಧಿಕಾರಿಗಳಾದ ಎಸ್.ಎಸ್.ಶಂಕರ್, ಎಂ.ಮುನಿಯಪ್ಪ, ದ್ರಾಕ್ಷಾಯಿಣಿ, ನರಸಿಂಹರಾಜು, ನಾರಾಯಣಸ್ವಾಮಿ ಹಾಜರಿದ್ದರು.

error: Content is protected !!