Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಸರಸ್ವತಿ ಸಂಜೀವಿನಿ ಒಕ್ಕೂಟದ ವತಿಯಿಂದ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
In English: Melur’s Saraswati Sanjeevini federation launched its monthly market, where self-help group women sold home-grown greens, vegetables, millets, homemade food items, and handloom clothes directly to customers, with organisers saying the monthly event aims to give rural women a middleman-free market for their products.
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕ ಹಾಗೂ ಗ್ರಾಮ ಪಂಚಾಯಿತಿ ಮೇಲೂರು ಇವರ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಸ್ವಸಹಾಯ ಗುಂಪುಗಳ ಮಹಿಳಾ ಸದಸ್ಯರು ತಯಾರಿಸಿದ ವಿವಿಧ ಉತ್ಪನ್ನಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಮಹಿಳೆಯರು ತಾವು ಬೆಳೆದ ಸೊಪ್ಪು, ತರಕಾರಿ, ಸಿರಿಧಾನ್ಯಗಳು, ಮನೆಯಲ್ಲೇ ತಯಾರಿಸಿದ ಆಹಾರ ಪದಾರ್ಥಗಳು, ಕೈಮಗ್ಗದ ಬಟ್ಟೆಗಳು ಸೇರಿದಂತೆ ವಿವಿಧ ಗುಣಮಟ್ಟದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿದರು.
ಜಿ.ಎಲ್.ಪಿ.ಎಫ್ ಅಧ್ಯಕ್ಷೆ ಮಂಗಳಗೌರಿ ಮಾತನಾಡಿ, “ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಗ್ರಾಮೀಣ ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಪ್ರತಿ ತಿಂಗಳು ಮಾಸಿಕ ಸಂತೆ ಆಯೋಜಿಸಲಾಗುತ್ತಿದೆ. ಇದರಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಲಿದೆ. ಸಾರ್ವಜನಿಕರು ಸಂತೆ ಸದುಪಯೋಗಪಡಿಸಿಕೊಳ್ಳಬೇಕು” ಎಂದರು.
ಸರ್ಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸರೋಜ ಎಸ್.ಎಂ. ಮಾತನಾಡಿ, “ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಹಾಗೂ ಸಮಾಜದ ಮುಖ್ಯವಾಹಿನಿಗೆ ಬರಲು ಸಂಜೀವಿನಿ ಒಕ್ಕೂಟ ಸಹಕಾರಿಯಾಗಿದೆ. ಮಹಿಳೆಯರು ಆರ್ಥಿಕ ಸಬಲತೆಯನ್ನು ಕಾಪಾಡಿಕೊಳ್ಳಬೇಕು” ಎಂದರು.
ಸರಸ್ವತಿ ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಶಿವಮ್ಮ, ಎಂ.ಬಿ.ಕೆ. ಚೈತ್ರಾ, ಎಲ್.ಸಿ.ಆರ್.ಪಿ. ನಾಗರತ್ನ, ಎಂ.ಎನ್. ಅಂಬಿಕಾ, ಕೃಷಿ ಸಖಿ ವಿನುತಾ ಆರ್., ಪಶುಸಖಿ ಇಂದ್ರ, ಟಿಪಿಎಂ ಕಾರ್ಯಕ್ರಮ ವ್ಯವಸ್ಥಾಪಕ ವಿಜಯಕುಮಾರ್, ಬಾಲರಾಜ್, ನರಸಿಂಹ, ದ್ಯಾವಮ್ಮ, ವನಸಖಿ ಅಮರಾವತಿ, ಪ್ರಭಾವತಿ, ಸುನೀತಾ ಹಾಗೂ ಜಿ.ಪಿ.ಎಲ್.ಎಫ್ ಸಿಬ್ಬಂದಿ ಇದ್ದರು.

