Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಗ್ರಾಮದೇವತೆ ಶ್ರೀ ಗಂಗಾದೇವಿ ದೇವಾಲಯ ದಲ್ಲಿ ಭಕ್ತರು ಹರಕೆಯಾಗಿ ಸಮರ್ಪಿಸಿದ್ದ ಸೀರೆಗಳ ಬಹಿರಂಗ ಹರಾಜು ಸೋಮವಾರ ನಡೆಯಿತು.
In English: The public auction of around 730 sarees offered as votive gifts at Melur’s Sri Gangadevi temple raised ₹1.44 lakh, with 146 buyers purchasing sarees under Tahsildar Gaganasindhu’s supervision, the proceeds to be deposited in the temple’s account.
ತಹಶೀಲ್ದಾರ್ ಗಗನಸಿಂಧು ಅವರ ನೇತೃತ್ವದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ದೇವಿಗೆ ಹರಕೆಯಾಗಿ ಸಮರ್ಪಿಸಲಾಗಿದ್ದ ಸುಮಾರು 730 ಸೀರೆಗಳನ್ನು ಹರಾಜಿಗೆ ಇಡಲಾಗಿತ್ತು. 146 ಮಂದಿ ಹರಾಜಿನಲ್ಲಿ ಸೀರೆಗಳನ್ನು ಖರೀದಿಸಿದರು.
ಹರಾಜಿನ ಮೂಲಕ ಒಟ್ಟು ₹1.44 ಲಕ್ಷ ಸಂಗ್ರಹವಾಗಿದ್ದು, ಈ ಮೊತ್ತವನ್ನು ದೇವಾಲಯದ ಖಾತೆಗೆ ಜಮಾ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ತಹಶೀಲ್ದಾರ್ ಗಗನಸಿಂಧು ಮಾತನಾಡಿ, “ಗಂಗಾತಾಯಿ ದೇವಾಲಯ ಪುರಾತನವಾಗಿದ್ದು, ರಾಜ್ಯ ಹಾಗೂ ಅಂತರರಾಜ್ಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ದೇವಾಲಯವು ಸಾಮರಸ್ಯದ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ. ಇಲ್ಲಿನ ಶಕ್ತಿ ಎಲ್ಲರಲ್ಲೂ ಭಕ್ತಿಯನ್ನು ವೃದ್ಧಿಸುತ್ತಿದೆ. ಯುವಕರು ಇಂತಹ ದೇವಾಲಯಗಳ ಅಭಿವೃದ್ಧಿಗೆ ಮುಂದಾಗಬೇಕು” ಎಂದರು.
ದೇವಾಲಯ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣಪ್ಪ, ಅಶ್ವಥಪ್ಪ, ಮುನಿಶಾಮಪ್ಪ, ಗುಂಡಪ್ಪ, ಗೋವಿಂದಪ್ಪ, ಉಪತಹಶೀಲ್ದಾರ್ ರಮೇಶ್, ಕಂದಾಯ ಇಲಾಖೆ ಅಧಿಕಾರಿಗಳು, ದೇವಾಲಯ ಸಮಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಮುಖಂಡರು ಇದ್ದರು.

