
Sidlaghatta : ಸರ್ಕಾರಿ ಶಾಲೆಗಳಲ್ಲೂ ಉತ್ತಮ ಕಲಿಕಾ ವಾತಾವರಣ ನಿರ್ಮಾಣವಾಗಬೇಕು, ಮಕ್ಕಳು ಆಸಕ್ತಿಯಿಂದ ಶಾಲೆಗೆ ಬರುವಂತಾಗಬೇಕು ಎಂಬ ಆಶಯದೊಂದಿಗೆ ಬೆಂಗಳೂರಿನ ಮೂನ್ಫ್ರಾಗ್ ಲ್ಯಾಬ್ಸ್ ಕಂಪನಿಯ ಉದ್ಯೋಗಿಗಳ ತಂಡ ಶನಿವಾರ ಕೋಟೆ ಬಾಲಕಿಯರ ಸರ್ಕಾರಿ ಶಾಲೆಯಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಿತು.
ಈಗಾಗಲೇ ಶಾಲೆಗೆ ಸುಣ್ಣಬಣ್ಣ ಬಳಿಯುವುದು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ನೆರವು ನೀಡಿರುವ ತಂಡ, ಈ ಬಾರಿ ಶಾಲೆಯ ಕಾಂಪೌಂಡ್ ಗೋಡೆಯ ಮೇಲೆ ಹಲವು ರೀತಿಯ ಚಿತ್ತಾರ ಬಿಡಿಸಿತು. ಮಕ್ಕಳೊಂದಿಗೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅವರ ಸೃಜನಶೀಲತೆಗೆ ಪ್ರೋತ್ಸಾಹ ನೀಡಿತು.
ಗುಣಮಟ್ಟದ ಶಿಕ್ಷಣಕ್ಕೆ ಮೂಲಸೌಕರ್ಯ ಅಗತ್ಯ
ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ ಮಾತನಾಡಿ, “ಮೂನ್ಫ್ರಾಗ್ ತಂಡವು ಗ್ರಾಮಾಂತರ ಟ್ರಸ್ಟ್ ಸಹಕಾರದೊಂದಿಗೆ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಉತ್ತಮ ಮೂಲಸೌಕರ್ಯವೂ ಅಗತ್ಯ. ಬಣ್ಣ ಬಳಿಯುವುದರ ಜತೆಗೆ ಜಲಸಂಪನ್ಮೂಲಗಳ ಮಹತ್ವ ಹಾಗೂ ಕಲಿಕೆಯನ್ನು ಉತ್ತಮಪಡಿಸುವ ಕುರಿತು ಜಾಗೃತಿ ಮೂಡಿಸುವ ಪ್ರಯತ್ನವೂ ನಡೆಯುತ್ತಿದೆ” ಎಂದರು.
ಶಾಲೆಯ ಆಸ್ತಿಯನ್ನು ಸಂರಕ್ಷಿಸುವ ಜವಾಬ್ದಾರಿ ಸಾರ್ವಜನಿಕರಿಗೂ ಇದೆ ಎಂದು ತಿಳಿಸಿದ ಅವರು, “ಕಾಂಪೌಂಡ್ ಹಾರಿ ಶಾಲೆಯೊಳಗೆ ಬರುವುದು, ಶೌಚಾಲಯಗಳನ್ನು ಹಾಳುಗೆಡವುವುದು ಸೇರಿದಂತೆ ಕೆಲವು ಸಮಸ್ಯೆಗಳಿವೆ. ಸರ್ಕಾರಿ ಶಾಲೆ ನಮ್ಮದು ಎಂಬ ಅಭಿಮಾನದಿಂದ ಸಾರ್ವಜನಿಕರು ಶಾಲೆಯ ಕಟ್ಟಡ ಹಾಗೂ ಇತರ ಸೌಲಭ್ಯಗಳನ್ನು ಕಾಪಾಡಬೇಕು” ಎಂದು ಮನವಿ ಮಾಡಿದರು.
ನೀರಿಗಾಗಿ ಟ್ಯಾಂಕರ್ ಅವಲಂಬನೆ
ಶಾಲೆಯ ಸಮಸ್ಯೆಗಳ ಕುರಿತು ಮಾತನಾಡಿದ SDMC (School Development and Monitoring Committee) ಅಧ್ಯಕ್ಷ ಮೂರ್ತಿ, ಶಾಲೆಯಲ್ಲಿ ನೀರಿನ ಸೌಲಭ್ಯವಿಲ್ಲದ ಕಾರಣ ಎರಡು ದಿನಕ್ಕೊಮ್ಮೆ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದು ತಿಳಿಸಿದರು.
“ಶಾಲೆಯ ಕಾಂಪೌಂಡ್ ಗೋಡೆಯ ಹೊರಭಾಗದ ಫುಟ್ಪಾತ್ನಲ್ಲಿ ಅಂಗಡಿಗಳನ್ನು ಇಡಲಾಗುತ್ತಿದೆ. ಈ ಬಗ್ಗೆ ನಗರಸಭೆಗೆ ದೂರು ಸಲ್ಲಿಸಿ, ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಶಾಲೆಗಳ ಅಭಿವೃದ್ಧಿಗೆ ಗ್ರಾಮಾಂತರ ಟ್ರಸ್ಟ್ ಸಹಕಾರ
ಗ್ರಾಮಾಂತರ ಟ್ರಸ್ಟ್ನ ಉಷಾ ಶೆಟ್ಟಿ ಮಾತನಾಡಿ, “ಮೂನ್ಫ್ರಾಗ್ ಲ್ಯಾಬ್ಸ್ ಕಂಪನಿಯವರು ಕಳೆದ ಐದು ವರ್ಷಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಮ್ಮ ಸಂಸ್ಥೆಯ ವಿವಿಧ ಕಾರ್ಯಗಳಿಗೆ ಬೆಂಬಲ ನೀಡುತ್ತಿದ್ದಾರೆ. ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳಲ್ಲಿ ಚಿತ್ರಕಲೆ, ಬಣ್ಣ ಬಳಿಯುವುದು, ಶೌಚಾಲಯ ನಿರ್ಮಾಣ ಹಾಗೂ ಮಳೆನೀರು ಕೊಯ್ಲು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇವೆ. ಶಾಲೆಯ ವಾತಾವರಣ ಆಕರ್ಷಕವಾಗಿದ್ದರೆ ಮಕ್ಕಳು ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಸರ್ಕಾರಿ ಶಾಲೆಗಳಿಗೆ ಇನ್ನಷ್ಟು ಮಕ್ಕಳು ಸೇರ್ಪಡೆಯಾಗಬೇಕು ಎಂಬುದು ನಮ್ಮ ಆಶಯ” ಎಂದು ತಿಳಿಸಿದರು. ಇದೇ ರೀತಿ ಶಾಲೆಗಳಿಗೆ ಸಂಸ್ಥೆಯೊಂದು ಹೊಸ ಶೌಚಾಲಯ ಕೊಡುಗೆ ನೀಡಿದ್ದನ್ನೂ ಈ ಹಿಂದೆ ವರದಿ ಮಾಡಲಾಗಿತ್ತು.
ಟ್ರಸ್ಟ್ ವತಿಯಿಂದ ತಾಲ್ಲೂಕಿನ ಹತ್ತು ಸರ್ಕಾರಿ ಶಾಲೆಗಳಿಗೆ ನೂರು ಡೆಸ್ಕ್ಗಳು ಹಾಗೂ ಒಂದರಿಂದ ಮೂರನೇ ತರಗತಿಯ ಮಕ್ಕಳಿಗಾಗಿ 138 ಪ್ರತ್ಯೇಕ ಆಸನಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಈ ಶಾಲೆಯ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್ಗಳನ್ನೂ ವಿತರಿಸಲಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಎಚ್.ಸಿ. ಮೋಹನ್ ಹಾಗೂ ಗ್ರಾಮಾಂತರ ಟ್ರಸ್ಟ್ನ ಅನಂತಲಕ್ಷ್ಮಿ ಉಪಸ್ಥಿತರಿದ್ದರು.
In English: A team of employees from Bengaluru-based Moonfrog Labs, working with Gramantara Trust, painted murals on the compound wall of the Kote Government Girls’ School on Saturday and took part in activities with the children. Block Education Officer Swamy appealed to the public to protect school property, SDMC president Murthy said the school depends on a water tanker every two days and that complaints to the city municipal council about shops on the footpath outside the wall have drawn no response, and the trust’s Usha Shetty said desks for ten government schools in the taluk are being prepared.