Home News ಹಿಪ್ಪುನೇರಳೆ ನುಸಿ ಪೀಡೆಯ ನಿಯಂತ್ರಣ ಕಾರ್ಯಾಗಾರ

ಹಿಪ್ಪುನೇರಳೆ ನುಸಿ ಪೀಡೆಯ ನಿಯಂತ್ರಣ ಕಾರ್ಯಾಗಾರ

0
Mulberry Silk Disease Awareness Workshop

Sidlaghatta : ಹಿಪ್ಪುನೇರಳೆ ಸೊಪ್ಪಿಗೆ ನಾನಾ ಬಗೆಯ, ಕಣ್ಣಿಗೆ ಕಾಣದ ನಾನಾ ತೆರನಾದ ಕೀಟಗಳು, ಪೀಡೆಗಳು ಹಾಗೂ ರೋಗಾಣುಗಳು ಬಾಧಿಸುತ್ತವೆ. ಇತ್ತೀಚೆಗೆ ನುಸಿ ಬಾಧೆ ತೀವ್ರಗೊಂಡಿದೆ. ಈ ನುಸಿ ಪೀಡೆ ರೇಷ್ಮೆ ಉದ್ದಿಮೆಗೆ ತಗುಲಿದ ಕೊರೊನಾ ಇದ್ದಂತಿದೆ ಎಂದು ಜಿ.ಕೆ.ವಿಕೆ ರೇಷ್ಮೆ ಕೃಷಿ ವಿಭಾಗದ ಪ್ರಾಧ್ಯಾಪಕ ಡಾ.ಮಂಜುನಾಥಗೌಡ ತಿಳಿಸಿದರು.

ರೇಷ್ಮೆ ಇಲಾಖೆಯಿಂದ ನಗರದ ರೇಷ್ಮೆ ಮೊಟ್ಟೆ ಬಿತ್ತನೆ ಕೋಠಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ “ಹಿಪ್ಪುನೇರಳೆಗೆ ನುಸಿ ರೋಗ ಮತ್ತು ಕೀಟ ನಿರ್ವಹಣೆ” ಬಗ್ಗೆ ರೈತರಿಗೆ ಅರಿವು ಮೂಡಿಸುವ ತಾಲ್ಲೂಕು ಮಟ್ಟದ ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಾಮಾನ್ಯವಾಗಿ ಟೊಮೇಟೊ, ಬದನೆಕಾಯಿಯಂತ ತರಕಾರಿ, ಗುಲಾಬಿಯಂತ ಹೂವುಗಳಿಗೆ ತಗಲುತ್ತಿದ್ದ ನುಸಿ ಪೀಡೆಯು ಇದೀಗ ಹಿಪ್ಪುನೇರಳೆ ಸೊಪ್ಪಿಗೆ ಬಾಧಿಸುತ್ತಿದೆ. ವರ್ಷದ ಉದ್ದಕ್ಕೂ ಹಿಪ್ಪುನೇರಳೆ ಸೊಪ್ಪು ಸಿಗುವುದರಿಂದ ನುಸಿಪೀಡೆಯು ಠಿಕಾಣಿ ಹೂಡಿದೆ ಎಂದರು.

ನುಸಿ ಕಾಟದಿಂದ ಶೇ 30 ರಷ್ಟು ಹಿಪ್ಪುನೇರಳೆ ಸೊಪ್ಪು ಇಳುವರಿ ಕುಸಿದಿದೆ. ಇದು ರೇಷ್ಮೆ ಕೃಷಿಕರಿಗೆ ನಷ್ಟವಾಗಲು ಕಾರಣವಾಗಿದೆ. ರೇಷ್ಮೆಗೂಡು ಉತ್ಪಾದನೆ ಕುಸಿತಕ್ಕೂ ಕಾರಣವಾಗುತ್ತಿದೆ. ಈ ವರ್ಷ ಬಿರಿಸು ಮಳೆ ಬೀಳದ ಕಾರಣವೂ ನುಸಿ ಪೀಡೆ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಹೇಳಿದರು.

ಜಿ.ಕೆ.ವಿ.ಕೆ ರೇಷ್ಮೆ ಕೃಷಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಕೆ.ಎಸ್.ವಿನೋದಾ ಮಾತನಾಡಿ, ನುಸಿಪೀಡೆ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು, ಸಿಂಪಡಣೆ ಮಾಡಬೇಕಾದ ಔಷಧಗಳು, ಬಳಕೆ ಪ್ರಮಾಣದ ಬಗ್ಗೆ, ಔಷದೋಪಚಾರ ಮಾಡಿದ ನಂತರ ಎಷ್ಟು ದಿನಗಳ ನಂತರ ಹಿಪ್ಪುನೇರಳೆ ಸೊಪ್ಪನ್ನು ರೇಷ್ಮೆಹುಳುಗಳಿಗೆ ನೀಡಬಹುದು ಎಂಬೆಲ್ಲಾ ಮಾಹಿತಿಯನ್ನು ರೈತರಿಗೆ ನೀಡಿದರು.

ಪ್ರಗತಿಪರ ರೈತ ಹಿತ್ತಲಹಳ್ಳಿ ಗೋಪಾಲಗೌಡ ಅವರು ರೈತರ ಪರವಾಗಿ ಮಾತನಾಡಿ, ಇದೀಗ ರೇಷ್ಮೆಗೂಡಿನ ಬೆಲೆ ಕುಸಿತಗೊಂಡಿದೆ. 500 ರೂಪಾಯಿಗಿಂತಲೂ ಕಡಿಮೆ ಬೆಲೆಗೆ ಮಾರಾಟವಾದಾಗ ಸರ್ಕಾರವು 100 ರೂ.ಪ್ರೋತ್ಸಾಹ ಧನ ನೀಡಬೇಕೆಂದು ಒತ್ತಾಯಿಸಿದರು.

ನುಸಿ ಪೀಡೆಯಿಂದ ಹಿಪ್ಪುನೇರಳೆ ಸೊಪ್ಪು ಹಾಳಾಗಿದ್ದು ಪ್ರತಿ ಎಕರೆಗೆ 25 ಸಾವಿರ ರೂ.ನಷ್ಟ ಪರಿಹಾರವನ್ನು ನೀಡಬೇಕು, ನುಸಿ ಪೀಡೆ ನಿಯಂತ್ರಣಕ್ಕೆ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯಮಟ್ಟದಲ್ಲಿ ರೇಷ್ಮೆ ಧಾರಣೆ ಕುಸಿತ ಮತ್ತು ನುಸಿ ರೋಗದ ಹಾವಳಿ ಕುರಿತಂತೆ ರೈತರ ಸಭೆ ಕರೆಯಬೇಕೆಂದು ಆಗ್ರಹಿಸಿದರು.

ರೇಷ್ಮೆ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ರಾಮಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು.

ರೇಷ್ಮೆ ಇಲಾಖೆಯ ಉಪನಿರ್ದೇಶಕ ಡಿ.ಎಂ.ಆಂಜನೇಯ್ಯಗೌಡ, ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು, ಮದನಗೋಪಾಲ್, ವಿಜ್ಞಾನಿಗಳಾದ ಡಾ.ಕೆ.ಎಸ್.ವಿನೋದ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version