ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ನಮ್ಮೂರ ಭೂಮಿ ನಮಗಿರಲಿ ಅನ್ಯರಿಗಲ್ಲವೆಂಬ ಘೋಷಣೆಯೊಂದಿಗೆ ರೈತ ಸಂಘ ಹಾಗೂ ಹಸಿರುಸೇನೆಯ(ಜಿ.ಜಿ.ಹಳ್ಳಿ ಬಿ.ನಾರಾಯಣಸ್ವಾಮಿ ಬಣದ) ಕಾರ್ಯಕರ್ತರು ನಗರದ ತಾಲೂಕು ಕಚೇರಿ ಮುಂದೆ ಕಾಯ್ದೆಯ ಪ್ರತಿಯನ್ನು ಸುಡುವ ಮೂಲಕ ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾಧ್ಯಕ್ಷ ಜಿ.ಜಿ.ಹಳ್ಳಿ ಬಿ.ನಾರಾಯಣಸ್ವಾಮಿ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿ ರೈತರಿಗೆ ಮಾರಕವಾಗಿರುವ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯ ಪ್ರತಿಗಳನ್ನು ಅಗ್ನಿಸ್ಪರ್ಶ ಮಾಡಿ ಈ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಅಂಚೆಪತ್ರ ಚಳುವಳಿಗೆ ಚಾಲನೆ ನೀಡಿದರು.
ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾಧ್ಯಕ್ಷ ಜಿ.ಜಿ.ಹಳ್ಳಿ ಬಿ.ನಾರಾಯಣಸ್ವಾಮಿ ಮಾತನಾಡಿ ರಾಜ್ಯ ರಾಜ್ಯ ಅವೈಜ್ಞಾನಿಕವಾಗಿ ಹಾಗೂ ರೈತರಿಗೆ ಮಾರಕವಾಗಿರುವ ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೊಳಿಸಿದರೆ ಸಿಎಂ ಬಿ.ಎಸ್.ಯಡಿಯೂರಪ್ಪ ಅಧಿಕಾರವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು ರೈತರ ಮಕ್ಕಳು ಎಂದು ಮತ ಪಡೆದುಕೊಂಡು ಶಾಸಕರಾಗಿರುವ ೨೨೪ ಜನ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
ರೈತರ-ಕಾರ್ಮಿಕ ಮತ್ತು ಜನಪರವಾಗಿರುವ ಜನಪ್ರತಿನಿಧಿಗಳನ್ನು ನಾವು ಆಯ್ಕೆ ಮಾಡಿದರೆ ಸರ್ಕಾರ ಜಾರಿಗೊಳಿಸಲು ಹೊರಟಿರುವ ಭೂಸುಧಾರಣಾ ಕಾಯ್ದೆ ವಿರುಧ್ಧ ವಿಧಾನಸಭೆಯ ಒಳಗೆ ಮತ್ತು ಹೊರಗೆ ಧ್ವನಿ ಎತ್ತುವ ಕೆಲಸವನ್ನು ಮಾಡುತ್ತಿದ್ದರು ಎಂದರು.
ಸುಗ್ರೀವಾಜ್ಞೆಯ ಮುಖಾಂತರ ಅನೇಕ ತಿದ್ದುಪಡಿಗಳನ್ನು ತಂದು ರಾಜ್ಯಪಾಲರ ಸಹಿಯನ್ನೂ ಪಡೆದಿರುವುದು ರಾಜ್ಯದ ರೈತರನ್ನು, ಗ್ರಾಮೀಣ ಜನರನ್ನು ಮಾತ್ರವಲ್ಲ, ಇಡೀ ನಾಗರೀಕ ಸಮಾಜವನ್ನೇ ಬೆಚ್ಚಿ ಬೀಳಿಸಿದೆ. ಸಮಾನತೆಯ ಆಶಯವುಳ್ಳ ‘ಕರ್ನಾಟಕ ಭೂಸುಧಾರಣಾ ಕಾಯ್ದೆ’ ಕರ್ನಾಟಕದ ಹೆಮ್ಮೆಯ ಕಿರೀಟದಂತಿದ್ದು ಆದರೇ ಕಾಯ್ದೆಯಲ್ಲಿ ಅನೇಕ ತಿದ್ದುಪಡಿ ತಂದು ರೈತರು ಭೂಮಿ ಕಳೆದುಕೊಳ್ಳುವ ಅಪಾಯ ತಂದಿಟ್ಟು ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಕಾಯ್ದಯನ್ನು ಜಾರಿಗೊಳಿಸಲು ಯಾವ ಕಾರಣಕ್ಕೂ ಬಿಡುವುದಿಲ್ಲ. ಇದರ ವಿರುಧ್ಧ ರಾಜ್ಯ-ಜಿಲ್ಲೆ-ತಾಲೂಕು-ಹೋಬಳಿ ಮತ್ತು ಪ್ರತಿ ಗ್ರಾಮ ಮಟ್ಟದಲ್ಲಿ ಹೋರಾಟ ನಡೆಸಿ ಸರ್ಕಾರದ ಕಣ್ಣು ತೆರೆಸುವ ಕೆಲಸವನ್ನು ಸಂಘಟನೆ ಮಾಡುತ್ತದೆ ಎಂದರು.
ತಹಸೀಲ್ದಾರ್ ಕೆ.ಅರುಂಧತಿ ಅವರಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮನವಿ ಪತ್ರವನ್ನು ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ನಮ್ಮೂರ ಭೂಮಿ ನಮಗಿರಲಿ ಅನ್ಯರಿಗಲ್ಲ ಸಂಚಾಲಕ ಗಂಗಾಧರ್, ರೈತ ಸಂಘದ ಜಿಲ್ಲಾಧ್ಯಕ್ಷ ಯಣ್ಣೂರು ಬಸವರಾಜು, ತಾಲೂಕು ಅಧ್ಯಕ್ಷ ಟಿ.ಮಂಜುನಾಥ್, ಬಾಗೇಪಲ್ಲಿ ತಾಲೂಕು ಅಧ್ಯಕ್ಷ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣಗೌಡ, ಗೌರವಾಧ್ಯಕ್ಷ ಬೈರಪ್ಪ, ಯಣ್ಣೂರು ಎಂ.ಶ್ರೀನಿವಾಸ್, ಚಿಂತಾಮಣಿ ಸತ್ಯನಾರಾಯಣ, ಜಯರಾಂ ಮತ್ತಿತರರು ಉಪಸ್ಥಿತರಿದ್ದರು.