ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ತಾಲ್ಲೂಕು ವಕೀಲರ ಸಂಘ, ಸಿಡಿಪಿಒ ಇಲಾಖೆ ಆಯೋಜಿಸಿದ್ದ ಪೋಷಣ್ ಅಭಿಯಾನದ ಜಾಥಾಗೆ ಚಾಲನೆ ನೀಡಿ, “ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ” ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ಮಾತನಾಡಿದರು.
ಗರ್ಭಿಣಿಯರು, ಬಾಣಂತಿಯರು ಯಾವುದೇ ಕಾರಣಕ್ಕೂ ಅಪೌಷ್ಟಿಕತೆಯಿಂದ ಹಾಗೂ ರಕ್ತಹೀನತೆಯಿಂದ ಬಳಲದಂತೆ ಸದಾ ನಿಗಾವಹಿಸಬೇಕು ಎಂದು ಅವರು ತಿಳಿಸಿದರು.
ಪೋಷಣ್ ಅಭಿಯಾನ ಜಾಥಾ ಮೂಲಕ ಗರ್ಭಿಣಿಯರು, ಮಕ್ಕಳು ಹಾಗೂ ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಲಿದ್ದೇವೆ. ಹಕ್ಕುಗಳ ನಿಜವಾದ ಮೂಲ ಇರುವುದು ಕರ್ತವ್ಯಗಳಲ್ಲಿ. ನಾವೆಲ್ಲರೂ ಕರ್ತವ್ಯಗಳನ್ನು ನಿಭಾಯಿಸಿದರೆ ಹಕ್ಕುಗಳು ದೂರವಾಗುವುದಿಲ್ಲ. ಕರ್ತವ್ಯಗಳನ್ನು ನಿಭಾಯಿಸದೆ ಹಕ್ಕುಗಳ ಹಿಂದೆ ಓಡಿದರೆ ಅವು ಕೈಗೆ ಸಿಗುವುದಿಲ್ಲ. ಮೂಲಭೂತ ಕರ್ತವ್ಯಗಳು ಜನರಿಗೆ ಅವರ ನೈತಿಕ ಹೊಣೆಗಾರಿಕೆಗಳನ್ನು ನೆನಪಿಸಿಕೊಡುತ್ತವೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂಜುಕುಮಾರ್ ಪೊಚ್ಚಾಪುರೆ, ಸಿಡಿಪಿಒ ನಾಗವೇಣಿ, ಮಹೇಶ್, ವಕೀಲ ಮಂಜುನಾಥ್, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.