Home News ನವೆಂಬರ್ 1 ನ್ನು ಬಾಲ್ಯವಿವಾಹ ನಿಷೇಧ ದಿನ ಎಂದು ಘೋಷಿಸಬೇಕು – ನಾಗಸಿಂಹ ಜಿ ರಾವ್

ನವೆಂಬರ್ 1 ನ್ನು ಬಾಲ್ಯವಿವಾಹ ನಿಷೇಧ ದಿನ ಎಂದು ಘೋಷಿಸಬೇಕು – ನಾಗಸಿಂಹ ಜಿ ರಾವ್

0

ಬಾಲ್ಯವಿವಾಹ ನಿಷೇಧ ಕಾಯ್ದೆ 2006 ನವೆಂಬರ್ 1ರಂದು ದೇಶದಲ್ಲಿ ಜಾರಿಗೆ ಬಂದಿದೆ. ಕಾಯಿದೆಯ ವಿಚಾರಗಳನ್ನು ಸಮುದಾಯಕ್ಕೆ ತಲುಪಲು ಮತ್ತು ಹೆಚ್ಚು ಪ್ರಚಾರ ಪಡೆಯಲು ನವೆಂಬರ್ 1 ನೇ ದಿನವನ್ನು ಬಾಲ್ಯವಿವಾಹ ನಿಷೇಧ ದಿನ ಘೋಷಣೆ ಮಾಡುವ ಮೂಲಕ ಸರ್ಕಾರ ತನ್ನ ಬದ್ಧತೆ ತೋರಬೇಕು ಎಂದು ಮಕ್ಕಳ ಹಕ್ಕುಗಳ ಸಂಸ್ಥೆಯ ನಾಗಸಿಂಹ ಜಿ ರಾವ್ ಒತ್ತಾಯಿಸಿದರು.

 ತಾಲ್ಲೂಕಿನ ಬಶೆಟ್ಟಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಚೈಲ್ಡ್ ರೈಟ್ಸ್ ಟ್ರಸ್ಟ್ ಶಿಡ್ಲಘಟ್ಟ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಬಾಲ್ಯವಿವಾಹ ನಿಷೇಧ ದಿನ ಅವಲೋಕನ ಪ್ರಯುಕ್ತ ಬಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆದ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಹಳ್ಳಿ ಮಟ್ಟದ ಬಾಲ್ಯವಿವಾಹ ನಿಷೇಧ ಅಧಿಕಾರಿಗಳಾದ ಶಾಲೆಗಳ ಮುಖ್ಯ ಶಿಕ್ಷಕರುಗಳು ಹಾಗೂ ಸಮುದಾಯದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

 ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಆರೋಗ್ಯ, ಶಿಕ್ಷಣ, ಪೋಲಿಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಂಯೋಜಿತ ಕ್ರಮಗಳನ್ನು ಅನುಸರಣೆ ಮಾಡಿಕೊಂಡು ಕಾರ್ಯನಿರ್ವಹಣೆ ಮಾಡಿದರೆ ಮಕ್ಕಳನ್ನು ಬಾಲ್ಯವಿವಾಹದಿಂದ ಸಂರಕ್ಷಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಹರೀಶ್ ಮಾತನಾಡಿ, ಹೆಣ್ಣು ಮಕ್ಕಳಿಗೆ 18  ತುಂಬುವ ಮೊದಲೇ ಗರ್ಭಿಣಿ ಆದರೆ ಗರ್ಭಾಶಯಕ್ಕೆ ಉಂಟಾಗುವ ಅಪಾಯದ ಕುರಿತು ಹಾಗೂ ಮಕ್ಕಳು ಮತ್ತು ಮಹಿಳೆಯರು ಯಾವರೀತಿ ಸಾವು ನೋವು ಆಗುತ್ತದೆ ಎಂದು ವಿವರಿಸಿದರು.

 ದಿಬ್ಬೂರಹಳ್ಳಿ ಪೋಲಿಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಎಂ.ನಾರಾಯಣಸ್ವಾಮಿ ಮಾತನಾಡಿ, ಬಾಲ್ಯವಿವಾಹ ಪ್ರಕರಣಗಳು ಸಾರ್ವಜನಿಕರ ಗಮನಕ್ಕೆ ಬಂದರೆ ತಪ್ಪದೆ ಪೋಲಿಸ್ ಗಮನಕ್ಕೆ ತಂದರೆ ಕಾನೂನಿನ ಪ್ರಕಾರ ಅವರ ಮೇಲೆ ಕ್ರಮಗಳನ್ನು ತೆಗೆದುಕೊಳ್ಳಲು ತಾವು ಸಿದ್ಧ ಎಂದು ಹೇಳಿದರು.

 ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ಮಾತನಾಡಿ, ಬಾಲ್ಯವಿವಾಹ ತಡೆಯಲು ಉಚಿತ ಮಕ್ಕಳ ಸಹಾಯವಾಣಿ 1098 ಗೆ ಪೋನ್ ಮಾಡಿ ಮಾಹಿತಿ ನೀಡಿದರೆ ಅಂತಹ ಸಂದರ್ಭದಲ್ಲಿ ಮಕ್ಕಳನ್ನು ಸಂರಕ್ಷಿಸಲು ದೇಶದ ಎಲ್ಲಾ ಭಾಗಗಳಲ್ಲಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಇರುವುದರಿಂದ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನುಡಿದರು.

 ಸಭೆಯಲ್ಲಿ ಹಾಜರಿದ್ದ ಇತರೇ ಅತಿಥಿಗಳು ಬಾಲ್ಯವಿವಾಹದಿಂದ ಅಂಗವಿಕಲ ಮಕ್ಕಳ ಜನನ, ಅಪೌಷ್ಟಿಕತೆ ಮತ್ತು ತಾಯಿ ಮತ್ತು ಮಕ್ಕಳ ಮರಣ ಪ್ರಮಾಣ ಹೆಚ್ಚಾಗುವಿಕೆ ಕುರಿತು ಮಾಹಿತಿ ನೀಡಿದರು. ವಿವಾಹಿತ ಕಿಶೋರಿ ಹೆಣ್ಣುಮಕ್ಕಳ ಸಶಕ್ತೀಕರಣ ಯೋಜನೆಯ ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರಿಗೆ ಚಿಕ್ಕವಯಸ್ಸಿನಲ್ಲೇ ಮದುವೆಗಳು ಆದ ಪರಿಣಾಮ ತಮಗಾದ ಆರೋಗ್ಯ ಸಮಸ್ಯೆಗಳು, ಶಿಕ್ಷಣ ಮತ್ತು ಆರ್ಥಿಕ ತೊಂದರೆಗಳು ತಮ್ಮ ಜೀವನದ ಮೇಲೆ ತುಂಬಾ ಗಂಭೀರ ಪರಿಣಾಮ ಬೀರಿರುವುದರಿಂದ ಅವರಿಗೆ ಸರ್ಕಾರ ಪುನರ್ವಸತಿ ಕಲ್ಪಿಸಲು ಆಗ್ರಹಿಸಿದರು. ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಾಲ್ಯವಿವಾಹ ನಿಷೇಧ ಕಾಯ್ದೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಯಿತು.

 ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪುಷ್ಪಾ ಗಂಗಾಧರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಮುನಾ ರಾಣಿ, ಮೇಲ್ವಿಚಾರಕಿ ರೋಜಾ ರಮಣಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ್, ಎಡಿಡಿ ಇಂಡಿಯಾ ಸಂಸ್ಥೆಯ ಮುರಳಿಧರ, ವೆಂಕಟೇಶ್, ಚೈಲ್ಡ್ ರೈಟ್ಸ್ ಟ್ರಸ್ಟ್ ಶಿಡ್ಲಘಟ್ಟ ಸಂಸ್ಥೆಯ ಸಿಬ್ಬಂದಿ ಕಾಂತರಾಜು, ರಾಮಕೃಷ್ಣ, ಸುಜಾತ ಮತ್ತು ಸತೀಶ್ ಹಾಜರಿದ್ದರು.