Home News ದ್ವಿತೀಯ ಪಿಯುಸಿ ಕಡೆಯ ಪರೀಕ್ಷೆಗೆ ಸಿದ್ಧಗೊಂಡ ಪರೀಕ್ಷಾ ಕೇಂದ್ರಗಳು

ದ್ವಿತೀಯ ಪಿಯುಸಿ ಕಡೆಯ ಪರೀಕ್ಷೆಗೆ ಸಿದ್ಧಗೊಂಡ ಪರೀಕ್ಷಾ ಕೇಂದ್ರಗಳು

0

ದ್ವಿತೀಯ ಪಿಯುಸಿ ಆಂಗ್ಲ ಭಾಷೆಯ ಪರೀಕ್ಷೆ ಗುರುವಾರ ನಡೆಯಲಿದ್ದು, ಶಿಡ್ಲಘಟ್ಟ ತಾಲ್ಲೂಕಿನ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 1,671 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ.
ಶಿಡ್ಲಘಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಮಳ್ಳೂರಿನ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರಗಳಾಗಿವೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 1,030 ವಿದ್ಯಾರ್ಥಿಗಳಿದ್ದರೆ, ಮಳ್ಳೂರಿನ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ 641 ವಿದ್ಯಾರ್ಥಿಗಳಿದ್ದಾರೆ.
“ಪದವಿ ಪೂರ್ವ ಶಿಕ್ಷಣ ಇಲಾಖೆ ನೀಡಿರುವ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡಿದ್ದೇವೆ. ನಗರಸಭೆ ಹಾಗೂ ಗ್ರಾಮ ಪಂಚಾಯಿತಿಯವರ ಸಹಕಾರದೊಂದಿಗೆ ಕಳೆದ ಮೂರು ದಿನಗಳಿಂದ ಪರೀಕ್ಷಾ ಕೇಂದ್ರಗಳು, ಆವರಣ, ಸಂಬಂದಿಸಿದ ಕೋಣೆ, ವರಾಂಡ ಎಲ್ಲ ಕಡೆಯೂ ಕ್ರಿಮಿನಾಶಕದ ಸಿಂಪಡನೆ ಮಾಡಲಾಗಿದೆ. ಆರೋಗ್ಯ ಸಿಬ್ಬಂದಿಯ ಸಹಕಾರ ಪಡೆದು ಪರೀಕ್ಷೆಗೆ ಬರುವ ವಿದ್ಯಾರ್ಥಿಗಳ ಥರ್ಮಲ್ ಸ್ಕ್ರೀನಿಂಗ್ ಮಾಡಿಸಲಾಗುವುದು, ಸ್ಯಾನಿಟೈಜ್ ಮಾಡಿ, ಅಂತರ ಕಾಯ್ದುಕೊಳ್ಳಲಾಗುವುದು. ವಿದ್ಯಾರ್ಥಿಗಳಿಗೆ ಜ್ವರ, ನೆಗಡಿ, ಕೆಮ್ಮು ಇದ್ದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ವ್ಯವಸ್ಥೆ ಮಾಡಲಾಗುವುದು. ಚಿಕ್ಕ ಕೊಠಡಿಯಾದರೆ 12 ಮಂದಿ, ದೊಡ್ಡ ಕೊಠಡಿಯಲ್ಲಿ 24 ಮಂದಿ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುವುದು” ಎಂದು ಪ್ರಾಂಶುಪಾಲ ಆನಂದ್ ತಿಳಿಸಿದರು.
“ಪರೀಕ್ಷಾ ಮೇಲ್ವಿಚಾರಕರಿಗೆ ಮಾಸ್ಕ್, ಸ್ಯಾನಿಟೈಜರ್, ಗ್ಲೌಜ್ ನೀಡಲಾಗುವುದು. ಶಿಡ್ಲಘಟ್ಟದಲ್ಲಿ ಒಂದು ಸಾವಿರ ಮಂದಿ ವಿದ್ಯಾರ್ಥಿಗಳಿರುವುದರಿಂದ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಪರೀಕ್ಷಾ ಕೇಂದ್ರಗಳಿರುತ್ತವೆ. ವಿದ್ಯಾರ್ಥಿಗಳು ಒಂದು ಗಂಟೆ ಮುಂಚಿತವಾಗಿ ಬರಬೇಕು” ಎಂದು ಅವರು ಹೇಳಿದರು.