ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರಸಮನ್ವಯಾಧಿಕಾರಿ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯ ವತಿಯಿಂದ ಸಮನ್ವಯ ಶಿಕ್ಷಣ ಜಾಗೃತಿ ಕಾರ್ಯಕ್ರಮ, ಕ್ಲಸ್ಟರ್ ಮಟ್ಟದ ವಿಶೇಷಚೇತನ ಮಕ್ಕಳ ಪೋಷಕರ ಸಭೆಯಲ್ಲಿ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಡಿ.ಎನ್.ಸುಕನ್ಯಾ ಮಾತನಾಡಿದರು.
ಅಂಗವಿಕಲ ಮಕ್ಕಳ ಬಗ್ಗೆ ಅಸಹ್ಯ ನಿರ್ಲಕ್ಷ್ಯ ತೋರದೇ ಅಗತ್ಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮುಖ್ಯವಾಹಿನಿಗೆ ತರಲು ಹೆಚ್ಚು ಕಾಳಜಿವಹಿಸಬೇಕು. ಪೌಷ್ಟಿಕಾಂಶಯುತ ಆಹಾರಕ್ರಮಗಳ ಅಳವಡಿಕೆ, ನಿಗದಿತ ವ್ಯಾಯಾಮ ಕ್ರಮಗಳನ್ನು ಅನುಸರಿಸಲು ಪೋಷಕರು ಒತ್ತುನೀಡಬೇಕು ಎಂದು ಅವರು ತಿಳಿಸಿದರು.
ಬಿಐಇಆರ್‌ಟಿ ಬಿ.ಎಂ.ಜಗದೀಶ್ ಮಾತನಾಡಿ, ತಾಲ್ಲೂಕಿನಲ್ಲಿರುವ ವಿಶೇಷಚೇತನ ಮಕ್ಕಳ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ, ಸಾಮಾನ್ಯ ಅಥವಾ ಗೃಹಾಧಾರಿತ ಶಿಕ್ಷಣಕ್ಕೆ ಮಾರ್ಗದರ್ಶನ ಮಾಡಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಸಮನ್ವಯ ಶಿಕ್ಷಣದಡಿ ಅನೇಕ ವಿಶೇಷಚೇತನ ಮಕ್ಕಳಿಗೆ ಆರ್ಥಿಕ ಸವಲತ್ತುಗಳನ್ನು ಕಲ್ಪಿಸಬೇಕಿದೆ. ಹೋಬಳಿಗೊಂದು ಫಿಸಿಯೋತೆರಪಿ, ಮಾರ್ಗದರ್ಶನ ಕೇಂದ್ರಗಳನ್ನು ತೆರೆದು ಸೂಕ್ತ ಮಾರ್ಗದರ್ಶನ ನೀಡಬೇಕಿದೆ ಎಂದರು.
ಬಿಆರ್‌ಸಿ ಸಮನ್ವಯಾಧಿಕಾರಿ ತ್ಯಾಗರಾಜು ಮಾತನಾಡಿ, 18 ವರ್ಷದೊಳಗಿನ ಎಲ್ಲಾ ಮಕ್ಕಳೂ ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಶಾಲೆಯಿಂದ ದೊರೆಯಬಹುದಾದ ಶೈಕ್ಷಣಿಕ ಸೌಲಭ್ಯಗಳು, ಆಹಾರಧಾನ್ಯವನ್ನು ನಿಗದಿತವಾಗಿ ಪಡೆದು ವಿಶೇಷಚೇತನ ಮಕ್ಕಳ ಬಗ್ಗೆ ಪೋಷಕರು ಮತ್ತಷ್ಟು ಗಮನವಹಿಸಬೇಕು ಎಂದರು.
ಎಂಆರ್‌ಡಬ್ಲ್ಯೂ ಸಂಪನ್ಮೂಲವ್ಯಕ್ತಿ ರಾಮಚಂದ್ರಪ್ಪ ಮಾತನಾಡಿ, ವಿಶೇಷಚೇತನ ಮಕ್ಕಳಿಗೆ ಸಿಗುವ ಶೈಕ್ಷಣಿಕ ಸವಲತ್ತುಗಳು, ಸ್ವಯಂಉದ್ಯೋಗಕ್ಕೆ ಸಿಗುವ ಆರ್ಥಿಕ ಸೌಲಭ್ಯಗಳ ಬಗ್ಗೆ ವಿವರಿಸಿದರು.
ತಾಲ್ಲೂಕಿನ ಶಾಲೆಗಳಲ್ಲಿನ ವಿಶೇಷಚೇತನ ಮಕ್ಕಳ ಮಾನಸಿಕ ಮತ್ತು ದೈಹಿಕ ಸದೃಡತೆಯ ಹಾದಿ ವೀಡಿಯೋ ಪ್ರದರ್ಶನ ನಡೆಯಿತು. ಅತಿ ಹೆಚ್ಚು ಅಂಕಗಳಿಸಿದ ವಿಶೇಷಚೇತನ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಬೈರಾರೆಡ್ಡಿ, ಸಿಆರ್‌ಪಿ ಎಂ.ರಮೇಶ್‌ಕುಮಾರ್, ಮುಖ್ಯಶಿಕ್ಷಕ ವಿ.ವಿಶ್ವನಾಥ್, ಹುಸೇನ್, ಮುಖ್ಯಶಿಕ್ಷಕಿ ನೇತ್ರಾವತಿ, ಪಿ.ಗೀತಾ, ವಿರೂಪಾಕ್ಷ, ಬಿಐಆರ್‌ಟಿ ರಾಧಮ್ಮ, ವಿಆರ್‌ಡಬ್ಲ್ಯೂ ನಾಗೇಶ್ ಹಾಜರಿದ್ದರು.