Home News ಶಿಡ್ಲಘಟ್ಟ ತಾಲ್ಲೂಕು ಕಸಾಪ ಕಚೇರಿಯ ಉದ್ಘಾಟನೆ

ಶಿಡ್ಲಘಟ್ಟ ತಾಲ್ಲೂಕು ಕಸಾಪ ಕಚೇರಿಯ ಉದ್ಘಾಟನೆ

0

ತಾಲ್ಲೂಕಿನ ಶಿಲೇಮಾಕಲಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಕಟ್ಟಡದಲ್ಲಿ ಮಂಗಳವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿ ಉದ್ಘಾಟಿಸಿ ಜಿಲ್ಲಾ ಕಸಾಪ ಅಧ್ಯಕ್ಷ ಕೈವಾರ ಶ್ರೀನಿವಾಸ್ ಮಾತನಾಡಿದರು.

 ಕ್ರಿಯಾಶೀಲವಾಗಿ ಕನ್ನಡ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದ ಶಿಡ್ಲಘಟ್ಟ ತಾಲ್ಲೂಕು ಕಸಾಪ ಇದೀಗ ತನ್ನದೇ ಆದ ಕಚೇರಿಯನ್ನು ಶಿಕ್ಷಣ ಇಲಾಖೆಯ ನೆರವಿನೊಂದಿಗೆ ಪ್ರಾರಂಭಿಸುತ್ತಿರುವುದು ಹೆಮ್ಮೆಯ ಸಂಗತಿ. ಕನ್ನಡ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚಾಗಲು ಇದರಿಂದ ಅನುವಾಗಲಿದೆ ಎಂದು ಅವರು ತಿಳಿಸಿದರು.

 ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕಸಾಪ ಕಾರ್ಯಕ್ರಮಗಳು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನಡೆದಿವೆ. ತಾಲ್ಲೂಕಿನ ಪ್ರತಿಯೊಂದು ಭಾಗವನ್ನೂ ಕಸಾಪ ತಲುಪಿದೆ ಎಂದರು.

  ತಾಲ್ಲೂಕು ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ತಾಲ್ಲೂಕು ಕಸಾಪ ವತಿಯಿಂದ ನೆರೆಯ ರಾಜ್ಯ ಆಂಧ್ರದಲ್ಲಿ, ಬಿಜಾಪುರದಲ್ಲಿ, ಸಿದ್ಧಗಂಗಾ ಮಠದಲ್ಲಿ, ಸಾಲು ಮರದ ತಿಮ್ಮಕ್ಕನವರ ಮನೆಯಲ್ಲಿ, ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಹಾಗೂ ರೈಲಿನಲ್ಲಿ ಸಹ ಕನ್ನಡ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಒಟ್ಟು 130 ಕಾರ್ಯಕ್ರಮಗಳನ್ನು ಎರಡು ವರ್ಷದ ಅವಧಿಯಲ್ಲಿ ನಡೆಸಿದ್ದೇವೆ. ಕೊರೊನಾ ಸಂದರ್ಭದಲ್ಲೂ ಕೊರೊನಾ ವಾರಿಯರ್ಸ್ ಗಳಿಗೆ ಕಸಾಪ ವತಿಯಿಂದ ನೆರವಾಗಿದ್ದೇವೆ. ಕೊಡಗು ಪ್ರವಾಹ ಪೀಡಿತರಿಗೆ ನಾವು 30 ಸಾವಿರ ದೇಣಿಗೆ ಸಂಗ್ರಹಿಸಿ ನೀಡಿರುವುದಾಗಿ ವಿವರಿಸಿದರು.

  ಶಿಡ್ಲಘಟ್ಟ ತಾಲ್ಲೂಕು ಕಸಾಪ ಇದೀಗ ತನ್ನದೇ ಆದ ಕಚೇರಿ ಹೊಂದಿರುವುದರಿಂದ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ ಪಸರಿಸಲು, ಜನರನ್ನು ತಲುಪಲು ಪ್ರೇರೇಪಿಸಲು ಅನುಕೂಲವಾಗಲಿದೆ ಎಂದರು.

  ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಜಯರಾಮ್ ಮಾತನಾಡಿ, ತಾಲ್ಲೂಕು ಕಸಾಪ ಕಚೇರಿಗೆ ಪೀಠೋಪಕರಣಗಳನ್ನು ಕೊಡಿಸುವುದಾಗಿ ಹಾಗೂ ಗ್ರಾಮೀಣ ಭಾಗದಲ್ಲಿ ಕನ್ನಡ ಕಾರ್ಯಕ್ರಮಗಳನ್ನು ನಡೆಸಲು ನೆರವು ನೀಡುವುದಾಗಿ ಹೇಳಿದರು.

  ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಯಪ್ಪ, ಗೋವಿಂದರಾಜು, ಗ್ರಂಥಪಾಲಕ ಮುನಿರಾಜು, ಕಸಾಪ ತಾಲ್ಲೂಕು ಮಹಿಳಾ ಪ್ರತಿನಿಧಿ ದಾಕ್ಷಾಯಿಣಿ, ಪ್ರತಿನಿಧಿ ಮುನಿಯಪ್ಪ, ಮಾಜಿ ತಾಲ್ಲೂಕು ಅಧ್ಯಕ್ಷರಾದ ವೈ.ಎನ್.ದಾಶರಥಿ, ಶ್ರೀನಿವಾಸ್, ಕೆಂಪಣ್ಣ, ಮುಖ್ಯಶಿಕ್ಷಕಿ ಶೋಭಾ, ಶಂಕರ್, ಶ್ರೀನಿವಾಸ್, ಗೌರಿಬಿದನೂರು ಕಸಾಪ ಅಧ್ಯಕ್ಷ ರವೀಂದ್ರ, ಕಾರ್ಯದರ್ಶಿ ನಂಜುಂಡಪ್ಪ ಹಾಜರಿದ್ದರು.

error: Content is protected !!