
Sidlaghatta : ನಗರದ ಹಲವು ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಅವ್ಯವಸ್ಥೆಯಿಂದ ಕೂಡಿದ್ದು, ನಾಗರಿಕರು ದುರ್ವಾಸನೆಯ ನಡುವೆ ಸಂಚರಿಸುವಂತಾಗಿದೆ. ಕೋಟೆ ಪ್ರದೇಶದಲ್ಲಿರುವ ಕ್ರೆಸೆಂಟ್ ಖಾಸಗಿ ಶಾಲೆಯ ಸಮೀಪದ ಒಳಚರಂಡಿಯ ಮ್ಯಾನ್‌ಹೋಲ್ ತುಂಬಿದ್ದು, ಶಾಲಾ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡೇ ತರಗತಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲೆಯ ಸಮೀಪದಲ್ಲಿರುವ ಮ್ಯಾನ್‌ಹೋಲ್‌ನಿಂದ ಕೊಳಚೆ ಹಾಗೂ ತ್ಯಾಜ್ಯ ನೀರು ಸಮರ್ಪಕವಾಗಿ ಹರಿಯದೆ ರಸ್ತೆಯಲ್ಲೇ ನಿಂತಿದೆ. ಇದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಹರಡಿದ್ದು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದೆ.
ಒಳಚರಂಡಿ ಸಮಸ್ಯೆ ಬಗೆಹರಿಸುವಂತೆ ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಮಳೆ ಬಂದ ಸಂದರ್ಭದಲ್ಲಿ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಶಾಲಾ ಪರಿಸರವು ಮಕ್ಕಳಿಗೆ ಆರೋಗ್ಯಕರ, ಸ್ವಚ್ಛ ಹಾಗೂ ಸುರಕ್ಷಿತವಾಗಿರಬೇಕಾದ ಅಗತ್ಯವಿದೆ. ಆದ್ದರಿಂದ ನಗರಸಭೆ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಮ್ಯಾನ್‌ಹೋಲ್ ದುರಸ್ತಿ ಮಾಡಬೇಕು. ಜತೆಗೆ ನಿಂತಿರುವ ಕೊಳಚೆ ನೀರನ್ನು ತೆರವುಗೊಳಿಸಿ, ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕಗೊಳಿಸುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ನಾಗರಿಕರು ಹಾಗೂ ಪೋಷಕರು ಒತ್ತಾಯಿಸಿದ್ದಾರೆ.
In English: Residents of Sidlaghatta town say the underground drainage (UGD) system is in disarray in several areas. Near the Crescent private school in the Kote area, an overflowing sewer manhole has left sewage standing on the road, forcing students and parents to walk through the stench. Locals say repeated appeals to the Municipality have brought no result, fear disease outbreaks during rain, and demand immediate repair and a permanent solution.