
Sidlaghatta : ಶ್ರಾವಣ ಮಾಸದ ಶನಿವಾರದ ಅಂಗವಾಗಿ ತಾಲ್ಲೂಕಿನ ವಿವಿಧೆಡೆ ಇರುವ ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ಶನಿವಾರ ವಿಶೇಷ ಪೂಜೆ, ಅಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನಡೆದವು.
In English: Sidlaghatta taluk’s Venkataramanaswamy temples held special Shravana Saturday pujas and abhishekams, drawing large numbers of devotees, while the Sri Vaikuntha Kshetra temple near Belluti Gate concluded a four-day third-anniversary celebration with a Srinivasa Kalyanotsava and mass annadasoha.
ಬೆಳಿಗ್ಗೆಯಿಂದಲೇ ದೇವಾಲಯಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು. ದೇವಾಲಯಗಳಲ್ಲಿ ವಿಶೇಷ ಅಲಂಕಾರ, ನೈವೇದ್ಯ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ವೈಕುಂಠ ಕ್ಷೇತ್ರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ:
ಶಿಡ್ಲಘಟ್ಟ–ಜಂಗಮಕೋಟೆ ರಸ್ತೆಯ ಬೆಳ್ಳೂಟಿ ಗೇಟ್ ಸಮೀಪದ ಶ್ರೀ ವೈಕುಂಠ ಕ್ಷೇತ್ರದ ಶ್ರೀ ಲಕ್ಷ್ಮೀವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಯ ಮೂರನೇ ವಾರ್ಷಿಕೋತ್ಸವ ಹಾಗೂ ಶ್ರಾವಣ ಮಾಸದ ಪ್ರಯುಕ್ತ ಸೆಪ್ಟೆಂಬರ್ 2ರಿಂದ 5ರವರೆಗೆ ನಾಲ್ಕು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಬುಧವಾರ ಸಂಜೆ ಸಂಕಲ್ಪ, ಪುಣ್ಯಾಹವಾಚನ, ವಿಘ್ನೇಶ್ವರ ಪೂಜೆ, ಭಗವದ್ ವಾಸುದೇವ ಮಸ್ತಕಾಭಿಷೇಕ, ರಕ್ಷಾಬಂಧನ, ಗಣಪತಿ–ನವಗ್ರಹ ಸಹಿತ ಮೃತ್ಯುಂಜಯ ಹೋಮ, ಮಹಾಶಾಂತಿ, ನೈವೇದ್ಯ ಹಾಗೂ ಮಂಗಳಾರತಿ ನೆರವೇರಿದವು.
ಗುರುವಾರ ಬೆಳಿಗ್ಗೆ ಸುಪ್ರಭಾತ, ಪ್ರಧಾನ ಕಳಶಾರಾಧನೆ, ಮೂಲ ದೇವರಿಗೆ ಅಭಿಷೇಕ, ಬೆಳ್ಳಿ ಕಿರೀಟಾರೋಹಣ, ಶ್ರೀ ಮಹಾಸುದರ್ಶನ ಹೋಮ, ಶ್ರೀನಿವಾಸ ದಿವ್ಯಾಸ್ತ್ರ ಹೋಮ, ಪರಿವಾರ ಹೋಮ, ಪ್ರಾಯಶ್ಚಿತ ಹೋಮ, ಶಾಂತಿ ಹೋಮ ಹಾಗೂ ಮಹಾಸ್ನಪನ ನಡೆಯಿತು. ಬಳಿಕ ನೈವೇದ್ಯ, ಬಲಿಹರಣ ಹಾಗೂ ಆಸ್ಥಾನ ಸೇವೆ ನೆರವೇರಿದವು. ಸಂಜೆ ನಡೆದ ಶ್ರೀನಿವಾಸ ಕಲ್ಯಾಣ ಮಹೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಶುಕ್ರವಾರ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ನೈವೇದ್ಯ ಹಾಗೂ ಮಹಾಮಂಗಳಾರತಿ ನೆರವೇರಿದವು. ಶನಿವಾರ ಬ್ರಾಹ್ಮಿ ಮುಹೂರ್ತದಲ್ಲಿ ಸುಪ್ರಭಾತದೊಂದಿಗೆ ಕಾರ್ಯಕ್ರಮಗಳು ಆರಂಭಗೊಂಡವು. ವೇದ ಪಾರಾಯಣ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ನೈವೇದ್ಯ ಹಾಗೂ ಮಹಾಮಂಗಳಾರತಿಯೊಂದಿಗೆ ನಾಲ್ಕು ದಿನಗಳ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.
ದೇವಸ್ಥಾನದ ವತಿಯಿಂದ ಶನಿವಾರ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ತಾಲ್ಲೂಕಿನ ಇತರ ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿಯೂ ಶ್ರಾವಣ ಶನಿವಾರದ ಪ್ರಯುಕ್ತ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ನೈವೇದ್ಯ ಹಾಗೂ ಮಂಗಳಾರತಿ ನಡೆಯಿತು. ದೇವಾಲಯಗಳಲ್ಲಿ ಭಕ್ತರ ದರ್ಶನಕ್ಕೆ ಅನುಕೂಲವಾಗುವಂತೆ ವಿವಿಧ ವ್ಯವಸ್ಥೆ ಮಾಡಲಾಗಿತ್ತು. ಶ್ರಾವಣ ಶನಿವಾರದ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ದಿನವಿಡೀ ಭಕ್ತಿಪೂರ್ವಕ ವಾತಾವರಣ ಕಂಡುಬಂತು.