Home News CITU ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ

CITU ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ

0
Sidlaghatta CITU Protest

Sidlaghatta : ಕೇಂದ್ರ ಸರ್ಕಾರದ ನೂತನ ಕಾರ್ಮಿಕ ಸಂಹಿತೆಗಳು ಕಾರ್ಮಿಕ ವಿರೋಧಿಯಾಗಿವೆ ಮತ್ತು 29 ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳಾಗಿ ಬದಲಾಯಿಸುವುದರಿಂದ ಉದ್ಯೋಗ ಭದ್ರತೆ ಕಡಿಮೆಯಾಗುತ್ತದೆ ಎಂದು ಆರೋಪಿಸಿ, ಅಖಿಲ ಭಾರತ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಕರೆಯ ಮೇರೆಗೆ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಗುರುವಾರ ನಗರದಲ್ಲಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

CITU ಜಿಲ್ಲಾಧ್ಯಕ್ಷೆ ಲಕ್ಷ್ಮೀದೇವಮ್ಮ ಮಾತನಾಡಿ, ಕೇಂದ್ರ ಸರ್ಕಾರದ ಕಾರ್ಪೊರೇಟ್ ಪರ ನೀತಿಗಳು, ವಿದ್ಯುತ್ ತಿದ್ದುಪಡಿ ಮಸೂದೆ ಮತ್ತು ಖಾಸಗೀಕರಣದ ವಿರುದ್ಧ ಕಾರ್ಮಿಕರು ಧ್ವನಿ ಎತ್ತಬೇಕೆಂದು ಕರೆ ನೀಡಿದರು.

ನಾಲ್ಕು ಕಾರ್ಮಿಕ ಸಂಹಿತೆಗಳು ಮತ್ತು ನಿಯಮಗಳನ್ನು ರದ್ದುಗೊಳಿಸಿ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಟ್ರೇಡ್ ಯೂನಿಯನ್ ಹಕ್ಕುಗಳನ್ನು ಉಳಿಸಿ. ಮೂಲಭೂತ ಸೌಕರ್ಯ, ಉತ್ತಮ ಗುಣಮಟ್ಟದ ಆಹಾರ, ಸರಿಯಾದ ಶಾಲಾ ಪೂರ್ವ ಶಿಕ್ಷಣದೊಂದಿಗೆ ಯಶಸ್ವಿ ಐವತ್ತು ವರ್ಷಗಳನ್ನು ಪೂರೈಸಿದ ಐಸಿಡಿಎಸ್ ಅನ್ನು ಸಾಂಸ್ಥಿಕಗೊಳಿಸಿ, ಇಸಿಸಿಇ ಹಕ್ಕಿಗಾಗಿ ಕಾನೂನನ್ನು ಜಾರಿಗೊಳಿಸಿ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಗ್ರೇಡ್ 3 ಮತ್ತು 4 ಸರ್ಕಾರಿ ನೌಕರರನ್ನಾಗಿ ಕ್ರಮಬದ್ಧಗೊಳಿಸಿ. ಕನಿಷ್ಠ ವೇತನ, ಪಿಂಚಣಿ, ದೇಶಾದ್ಯಂತ ಏಕರೂಪಾ ಸೇವಾ ಷರತ್ತುಗಳು, ಗ್ರಾಚ್ಯುಟಿಗಾಗಿ ಸುಪ್ರಿಂ ಕೋರ್ಟ್ ಆದೇಶವನ್ನು ತಕ್ಷಣವೇ ಜಾರಿಗೊಳಿಸಿ ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅವರು ಪ್ರತಿಭಟಿಸಿದರು.

ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಬಸ್ ನಿಲ್ದಾಣದ ಬಳಿ ಕೆಲ ಕಾಲ ರಸ್ತೆ ತಡೆ ನಡೆಸಿದರು. ನಂತರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಪಾಪಣ್ಣ, ಅಶ್ವತ್ಥಮ್ಮ, ಭಾಗ್ಯ, ಹಂಸ, ಮಂಜುಳ, ನಾಗರತ್ನ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version