Home News ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ತಾಂತ್ರಿಕ ದೋಷ: ರೈತರ ಆತಂಕ

ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ತಾಂತ್ರಿಕ ದೋಷ: ರೈತರ ಆತಂಕ

0
Sidlaghatta Bele Samikshe Crop Survey Technical Fault Dibburahalli Farmers

Sidlaghatta : ರಾಜ್ಯ ಸರ್ಕಾರದ ‘ಬೆಳೆ ಸಮೀಕ್ಷೆ’ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷ ಉಂಟಾಗಿರುವುದಾಗಿ ಆರೋಪಿಸಿ ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಜಿಪಿಎಸ್ ಆಧಾರಿತ ಸ್ಕೆಚ್‌ಗಳಲ್ಲಿ ವ್ಯತ್ಯಾಸ ಕಾಣಿಸುತ್ತಿರುವುದರಿಂದ ತಮ್ಮ ಜಮೀನಿನ ಬೆಳೆಗಳನ್ನು ಸರಿಯಾಗಿ ದಾಖಲಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ದೂರಿದ್ದಾರೆ.

ರೈತರು ಹೇಳಿಕೆಯಂತೆ, ತಮ್ಮ ಜಮೀನಿನಲ್ಲೇ ನಿಂತು ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ನಡೆಸಿದಾಗ, ಆ್ಯಪ್‌ ನಲ್ಲಿ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಮತ್ತೊಬ್ಬರ ಜಮೀನಿನ ಸ್ಕೆಚ್ ಪ್ರದರ್ಶವಾಗುತ್ತಿದೆ. ಇದರಿಂದ ಬೆಳೆ ದಾಖಲಾತಿಯಲ್ಲಿ ಗೊಂದಲ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಬೆಳೆ ಹಾನಿ ಪರಿಹಾರ, ಬೆಳೆ ವಿಮೆ ಹಾಗೂ ಇತರೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.

ಜುಲೈ ತಿಂಗಳ ಅಂತ್ಯದವರೆಗೂ ಸಮರ್ಪಕ ಮಳೆಯಾಗದ ಕಾರಣ ಈಗಾಗಲೇ ಸಂಕಷ್ಟದಲ್ಲಿರುವ ರೈತರಿಗೆ, ಮಳೆಯಾಶ್ರಿತ ಹಾಗೂ ನೀರಾವರಿ ಬೆಳೆಗಳ ಸಮೀಕ್ಷೆಯಲ್ಲಿನ ಈ ತಾಂತ್ರಿಕ ದೋಷ ಮತ್ತಷ್ಟು ಸಮಸ್ಯೆ ಉಂಟುಮಾಡಿದೆ ಎಂದು ರೈತರು ತಿಳಿಸಿದ್ದಾರೆ.

ತಪ್ಪು ಸ್ಕೆಚ್ ದಾಖಲಾದಲ್ಲಿ ಪ್ರಕೃತಿ ವಿಕೋಪ ಅಥವಾ ಅತಿವೃಷ್ಟಿಯಿಂದ ಉಂಟಾಗುವ ಬೆಳೆ ಹಾನಿಗೆ ಪರಿಹಾರ, ಬೆಳೆ ವಿಮೆ ಹಾಗೂ ಸರ್ಕಾರದ ಖರೀದಿ ಕೇಂದ್ರಗಳಲ್ಲಿ ಬೆಂಬಲ ಬೆಲೆಗೆ ಕೃಷಿ ಉತ್ಪನ್ನ ಮಾರಾಟ ಮಾಡುವ ಸಂದರ್ಭದಲ್ಲಿ ತೊಂದರೆ ಎದುರಾಗುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದಿಶಾಂಕ್ ಹಾಗೂ ಬೆಳೆ ಸಮೀಕ್ಷೆ ಆ್ಯಪ್‌ ಗಳಲ್ಲಿನ ಜಿಪಿಎಸ್ ದೋಷವನ್ನು ತಕ್ಷಣ ಸರಿಪಡಿಸಬೇಕು. ಅಲ್ಲಿಯವರೆಗೆ ದಿಬ್ಬೂರಹಳ್ಳಿ ಗ್ರಾಮದ ಜಮೀನುಗಳಲ್ಲಿ ಬೆಳೆ ಸಮೀಕ್ಷೆ ನಡೆಸದಂತೆ ಕ್ರಮ ಕೈಗೊಳ್ಳಬೇಕು. ತಾಂತ್ರಿಕ ದೋಷದಿಂದ ರೈತರಿಗೆ ದೊರೆಯಬೇಕಾದ ಸರ್ಕಾರಿ ಸೌಲಭ್ಯಗಳು ವಿಳಂಬವಾಗದಂತೆ ಕಂದಾಯ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ವಿ.ಎಸ್‌.ಎಸ್‌.ಎನ್ ಅಧ್ಯಕ್ಷ ಡಿ.ಎಸ್.ಎನ್. ರಾಜು ಆಗ್ರಹಿಸಿದರು.

ದಿಬ್ಬೂರಹಳ್ಳಿ ಗ್ರಾಮದ ಬೆಳೆ ಸಮೀಕ್ಷೆಯಲ್ಲಿ ಲೋಪ ಕಂಡುಬಂದಿರುವ ಮಾಹಿತಿ ತಿಳಿಯುತ್ತಿದ್ದಂತೆ ಕೃಷಿ ಸಹಾಯಕ ನಿರ್ದೇಶಕ ರವಿ ಹಾಗೂ ತೋಟಗಾರಿಕೆ ಸಹಾಯಕ ನಿರ್ದೇಶಕ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಅಧಿಕಾರಿಗಳು, “ದಿಶಾಂಕ್ ಆ್ಯಪ್‌ ನಲ್ಲಿ ದಿಬ್ಬೂರಹಳ್ಳಿ ಗ್ರಾಮದ ಜಮೀನುಗಳ ಸ್ಕೆಚ್‌ ನಲ್ಲಿ ಕಂಡುಬರುವ ತಾಂತ್ರಿಕ ದೋಷವನ್ನು ಸರ್ಕಾರದ ಮೇಲಾಧಿಕಾರಿಗಳ ಗಮನಕ್ಕೆ ತಂದು ಶೀಘ್ರದಲ್ಲಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ರೈತರಿಗೆ ಭರವಸೆ ನೀಡಿದರು.

In English: Farmers in Dibburahalli village, Sidlaghatta taluk, have raised concerns over a technical fault in the state government’s Crop Survey (Bele Samikshe) app, which is displaying the sketch of a plot roughly one kilometre away instead of their own land. They fear this could affect their eligibility for crop loss compensation, crop insurance and other government schemes. Agriculture and horticulture department officials visited the site and assured farmers the GPS error would be flagged to senior officials and fixed soon.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

Exit mobile version