ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ನಡೆದಿರುವ ಅನುದಾನ ದುರುಪಯೋಗದ ಬಗ್ಗೆ ರಾಜ್ಯ ಮಟ್ಟದ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸಬೇಕು, ಅನುದಾನ ದುರ್ಭಳಕೆ ಮಾಡಿಕೊಂಡಿರುವ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ವಿರುದ್ದ ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ದಸಂಸ ತಾಲ್ಲೂಕು ಸಂಚಾಲಕ ಎನ್.ಎ.ವೆಂಕಟೇಶ್ ಒತ್ತಾಯಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಅನಿರ್ಧಿಷ್ಟ ಕಾಲ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ತಳ ಸಮುದಾಯಗಳ ಅಭಿವೃದ್ದಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿವರ್ಷ ಕೋಟ್ಯಾಂತರ ಹಣ ಅನುದಾನ ಮಂಜೂರು ಮಾಡುತ್ತಿದೆ. ಆದರೂ ಮಧ್ಯವರ್ತಿಗಳ ಹಾವಳಿಯಿಂದ ಯಾವುದೇ ಯೋಜನೆಯು ಅರ್ಹ ಫಲಾನುಭವಿಗೆ ತಲುಪುತ್ತಿಲ್ಲ. ಎಸ್‌ಸಿಪಿ ಹಾಗು ಟಿಎಸ್‌ಪಿ ಯೋಜನೆಯಡಿ ಬಿಡುಗಡೆಯಾಗುವ ಅನುದಾನ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣಕ್ಕಾಗಿ ಉಪಯೋಗವಾಗುವ ಬದಲಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೇಬು ತುಂಬುತ್ತಿದೆ. ಇದರಿಂದ ದಲಿತರ ಕಾಲೋನಿಗಳಲ್ಲಿ ಮೂಲಭೂತ ಸವಲತ್ತುಗಳಡಿಯಲ್ಲಿ ನಿರ್ಮಾಣವಾಗುವ ಸಿಸಿ ರಸ್ತೆ, ಚರಂಡಿ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದರು.
ತಾಲ್ಲೂಕಿನಾದ್ಯಂತ ಈಗಾಗಲೇ ನಿರ್ಮಾಣ ಹಂತದಲ್ಲಿರುವ ಬಿ.ಆರ್.ಅಂಬೇಡ್ಕರ್ ಭವನ, ಜಗಜೀವನರಾಂ ಭವನ ಹಾಗೂ ವಾಲ್ಮೀಕಿ ಭವನಗಳನ್ನು ಯಾವುದೇ ವಿನ್ಯಾಸ ಅಥವ ನೈಪುಣ್ಯತೆಯಿಲ್ಲದ ಗೋಡೌನ್ ಗಳ ರೀತಿ ನಿರ್ಮಾಣ ಮಾಡಲಾಗುತ್ತಿದೆ. ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಮೀನುಗಾರಿಕೆ ಇಲಾಖೆಯಲ್ಲಿ ಹಗಲು ದರೋಡೆ ನಡೆಯುತ್ತಿದೆ. ದಲಿತರ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ತೆಗೆದುಕೊಂಡು ದಲಿತೇತರ ಹಣವಂತರಿಗೆ ಅನುಕೂಲ ಮಾಡಿಕೊಡುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಬೇಕು. ದಲಿತರ ಕಲ್ಯಾಣಕ್ಕಾಗಿ ಶ್ರಮಿಸಬೇಕಾದ ಸಮಾಜ ಕಲ್ಯಾಣ ಇಲಾಖೆ ತನ್ನ ಜವಾಬ್ದಾರಿ ಮರೆತು ಭ್ರಷ್ಟ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಪರವಾಗಿ ಕೆಲಸ ಮಾಡುತ್ತಿರುವುದು ಖಂಡನೀಯ. ಹಾಗಾಗಿ ಕೂಡಲೇ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ದ ಉನ್ನತ ಮಟ್ಟದ ತನಿಖೆ ನಡೆಸಲು ಸರ್ಕಾರ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಸಂಘಟನಾ ಸಂಚಾಲಕರಾದ ಟಿ.ಎ.ಚಲಪತಿ, ಎಲ್.ವಿ.ವೆಂಕಟೇಶ್, ಡಿ.ಡಂ.ವೆಂಕಟೇಶ್, ಹುಜಗೂರು ವೆಂಕಟೇಶ್, ಸೊಣಗಾನಹಳ್ಳಿ ನರಸಿಂಹಯ್ಯ, ಶಿವು ಹಾಜರಿದ್ದರು.