
Sidlaghatta : ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ 2024-25ನೇ ಸಾಲಿನ ಯೋಜನೆಯಡಿ ಕ್ಷೇತ್ರದ ನಾಲ್ವರು ಅರ್ಹ ವಿಶೇಷಚೇತನ ಫಲಾನುಭವಿಗಳಿಗೆ ಗುರುವಾರ ಶಾಸಕ ಬಿ.ಎನ್. ರವಿಕುಮಾರ್ ದ್ವಿಚಕ್ರ ವಾಹನಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ತಲುಪಿಸುವ ಕಾರ್ಯ ಮುಂದುವರಿದಿದೆ. ಈರೇಬಲ್ಲ ಶ್ಯಾಮಲ, ಗುಂಡ್ಲಹಳ್ಳಿ ಮಂಜುನಾಥ್, ಈ.ತಿಮ್ಮಸಂದ್ರ ಮುನಿರಾಜು ಹಾಗೂ ಸೊಣ್ಣಗಾನಹಳ್ಳಿಯ ವೆಂಕಟರತ್ನಮ್ಮ ಅವರಿಗೆ ವಾಹನಗಳನ್ನು ಹಸ್ತಾಂತರಿಸಲಾಗಿದೆ ಎಂದರು.
2025-26ನೇ ಸಾಲಿನಲ್ಲಿ ಶಾಸಕರ ಅನುದಾನದಡಿ 18 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರಿಗೂ ಶೀಘ್ರದಲ್ಲೇ ದ್ವಿಚಕ್ರ ವಾಹನ ವಿತರಿಸಲಾಗುವುದು ಎಂದು ತಿಳಿಸಿದರು.
ಸ್ವಾವಲಂಬನೆಗೆ ನೆರವು
ಸೊಣ್ಣಗಾನಹಳ್ಳಿಯ ವಿಶೇಷಚೇತನ ಮಹಿಳೆ ವೆಂಕಟರತ್ನಮ್ಮ ಅವರು ದ್ವಿಚಕ್ರ ವಾಹನಕ್ಕಾಗಿ ಎರಡು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ತೀವ್ರ ಅಂಗವಿಕಲತೆಯಿಂದಾಗಿ ದೈನಂದಿನ ಓಡಾಟಕ್ಕೂ ತಂದೆ ಹಾಗೂ ಸಹೋದರರ ನೆರವು ಪಡೆಯಬೇಕಾಗಿತ್ತು. ಇದೀಗ ವಾಹನ ದೊರೆತಿರುವುದರಿಂದ ಸ್ವತಂತ್ರವಾಗಿ ಓಡಾಡಲು ಅನುಕೂಲವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ವಿಕಲಚೇತನರ ಇಲಾಖೆಯ ಅಧಿಕಾರಿ ಜ್ಯೋತಿ, ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಮುಖಂಡರಾದ ತಾದೂರು ರಘು, ಕೊತ್ತನೂರು ಲಕ್ಷ್ಮಿಪತಿ, ಎಸ್.ಎಂ. ರಮೇಶ್, ಮಂಜುನಾಥ್, ಮಧು, ಶಾಸಕರ ಆಪ್ತ ಸಹಾಯಕ ಕುಮಾರ್ ಹಾಜರಿದ್ದರು.
ಇದಕ್ಕೂ ಮುನ್ನ ತಾಲ್ಲೂಕಿನಲ್ಲಿ ವಿಶೇಷಚೇತನರಿಗೆ ಟ್ರೈಸಿಕಲ್ ವಿತರಣೆ ಕಾರ್ಯಕ್ರಮವೂ ನಡೆದಿತ್ತು.
In English: MLA B.N. Ravikumar distributed motorized two-wheelers to four eligible differently-abled beneficiaries at the taluk panchayat office under the 2024-25 scheme of the Department for Empowerment of Persons with Disabilities and Senior Citizens. Recipients included Sonnaganahalli’s Venkataratnamma, who had applied two years ago and previously depended on family members for daily mobility due to severe disability. The MLA said 18 more beneficiaries selected under his 2025-26 grant quota will receive vehicles soon.