Home News ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬಂದ್ ಯಶಸ್ವಿ

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬಂದ್ ಯಶಸ್ವಿ

0

ವಿವಿಧ ಸಂಘಟನೆಗಳು ಒಗ್ಗೂಡಿ ಐಕ್ಯ ಹೋರಾಟ ಸಮಿತಿ ಅಡಿಯಲ್ಲಿ ಕರೆ ನೀಡಿದ್ದ ರಾಜ್ಯ ಬಂದ್ ಗೆ ತಾಲ್ಲೂಕಿನಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು. ಅಂಗಡಿಗಳು ತೆರೆದಿರಲಿಲ್ಲ. ವಾಹನ ಸಂಚಾರ ಮಧ್ಯಾಹ್ನದವರೆಗೂ ವಿರಳವಾಗಿದ್ದವು.
ಬಂದ್ ಗೆ ಬೆಂಬಲಿಸಿದ್ದ ವಿವಿಧ ರೈತ ಸಂಘಗಳು ಹಾಗೂ ಇನ್ನಿತರ ಸಂಘಟನೆಗಳ ಸದಸ್ಯರು ಬೆಳಗ್ಗೆ ನಗರದ ಕೋಟೆ ವೃತ್ತದಿಂದ ಬಸ್ ನಿಲ್ದಾಣದವರೆಗೂ ಪಂಜಿನ ಮೆರವಣಿಗೆ ನಡೆಸಿದರು. ಬಸ್ ನಿಲ್ದಾಣದ ಬಳಿ ಮಾನವ ಸರಪಣಿ ನಿರ್ಮಿಸಿ ರಾಜ್ಯ ಮತ್ತು ಕೇಂದ್ರಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರೈತರ ಹೆಸರಿನಲ್ಲಿ ಪ್ರಮಾಣ ಮಾಡಿ ಅಧಿಕಾರ ಹಿಡಿದ ಯಡಿಯೂರಪ್ಪನವರು ಇಂದು ರೈತರ ಎದೆಗೆ ನೇರಾನೇರಾ ಚೂರಿ ಹಾಕಿ ತಾನು ರೈತರ ಪರ ಅಲ್ಲ, ಕಾರ್ಪೊರೇಟ್ ಪರ ಎಂಬುದನ್ನು ರುಜುವಾತು ಪಡಿಸಿಕೊಂಡಿದ್ದಾರೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
“ಉಳುವವರಿಗೇ ಭೂಮಿ” ಎಂಬ ಸಮಾಜವಾದಿ ಆಶಯದ ಕೊಲೆಗೈದು “ಉಳ್ಳವರದೇ ಎಲ್ಲಾ ಭೂಮಿ” ಎಂಬ ಬಲಾಢ್ಯ ಹಿತಾಸಕ್ತಿಯನ್ನು ಎತ್ತಿಹಿಡಿದಿದ್ದಾರೆ. ಕಾರ್ಪೋರೇಟ್ ಮತ್ತು ರಿಯಲ್ ಎಸ್ಟೇಟ್ ಲಾಭಿಗೆ ನಮ್ಮ ಬಡಜನರ ಬದುಕನ್ನು ಬಲಿ ಕೊಟ್ಟಿದ್ದಾರೆ ಎಂದು ಪ್ರತಿಭಟನಾ ನಿರತರು ದೂರಿದರು.
ರಸ್ತೆಯಲ್ಲಿ ಕುಳಿತು ತಡೆ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ಎಬ್ಬಿಸಿ ಕಳುಹಿಸಿದರು. ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದರು. ನಂತರ ಬೈಕ್ ರ್‍ಯಾಲಿ ನಡೆಸಿದರು.
ತಾಲ್ಲೂಕಿನ ಹಲವೆಡೆ ರಸ್ತೆ ತಡೆ ನಡೆಸಲು ಪ್ರಯತ್ನಿಸಿದ ಐಕ್ಯ ಹೋರಾಟ ಸಮಿತಿ ಸದಸ್ಯರನ್ನು ಪೊಲೀಸರು ಬಂಧಿಸಿರುವುದನ್ನು ಖಂಡಿಸಿ ರೈತಸಂಘದ ಸದಸ್ಯರು ಪೊಲೀಸ್ ಠಾಣೆಯ ಮುಂದೆ ಧರಣಿ ಕುಳಿತರು. ಡಿವೈಎಸ್ ಪಿ ಲಕ್ಶ್ಮಯ್ಯ ಆಗಮಿಸಿ ಬಂಧಿಸಿರುವವರನ್ನು ಬಿಡುಗಡೆ ಮಾಡುತ್ತೇವೆ, ಶಾಂತಿಯುತವಾಗಿ ಬಂದ್ ಆಚರಿಸಬೇಕು, ಯಾರೊಬ್ಬರಿಗೂ ಒತ್ತಡ ಹೇರಬಾರದು, ರಸ್ತೆ ತಡೆ ಮಾಡಬಾರದು ಎಂದು ತಿಳಿಸಿ ಧರಣಿ ಕುಳಿತವರನ್ನು ಮನವೊಲಿಸಿ ಕಳುಹಿಸಿದರು.