Home News ಫೆಬ್ರುವರಿ 21ರಂದು ಬೃಹತ್ ಉದ್ಯೋಗಮೇಳ

ಫೆಬ್ರುವರಿ 21ರಂದು ಬೃಹತ್ ಉದ್ಯೋಗಮೇಳ

0
Sidlaghatta Leo Club Job Mela

Sidlaghatta : ಲಯನ್ಸ್ ಇಂಟರ್ ನ್ಯಾಷನಲ್ ಕ್ಲಬ್ ಡಿಸ್ಟ್ರಿಕ್ಟ್ 3179 ಹಾಗೂ ಲಿಯೋ ಕ್ಲಬ್ ಆಫ್ ಕಿರಣ ಸಹಯೋಗದಲ್ಲಿ ಬೃಹತ್ ಉದ್ಯೋಗಮೇಳವನ್ನು ಫೆಬ್ರುವರಿ 21ರ ಶನಿವಾರದಂದು ನಗರದ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಲಿಯೋ ಕ್ಲಬ್ ಆಫ್ ಕಿರಣ ಅಧ್ಯಕ್ಷ ಎಸ್.ಶ್ರೀಕಾಂತ್ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.

50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳ ಸಹಯೋಗದೊಂದಿಗೆ ಸ್ಥಳೀಯ ಯುವಜನರು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅನುವು ಮಾಡಿಕೊಡಲಾಗುತ್ತದೆ. ಸುಮಾರು 2000 ಕ್ಕೂ ಹೆಚ್ಚು ಉದ್ಯೋಗವಕಾಶಗಳನ್ನು ಕಲ್ಪಿಸುವ ಉದ್ದೇಶ ಹೊಂದಿದ್ದೇವೆ. ಎಸ್.ಎಸ್.ಎಲ್.ಸಿ. ಪಿಯುಸಿ, ಐ.ಟಿ.ಐ, ಡಿಪ್ಲೊಮ, ಪದವಿ, ಸ್ನಾತಕೋತ್ತರ ಪದವಿ ಪಡೆದವರು ತಮ್ಮ ಅಂಕಪಟ್ಟಿ, ಸ್ವವಿವರ, ಆಧಾರ್ ಕಾರ್ಡ್, ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳನ್ನು ತರಬೇಕು. ವಿದ್ಯಾರ್ಹತೆಗೆ ತಕ್ಕಂತೆ ಕಂಪನಿಗಳೊಂದಿಗೆ ಸಂದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗುತ್ತದೆ.

ಯಾವುದೇ ಶುಲ್ಕವಿಲ್ಲ. ತಮ್ಮ ಸ್ವವಿವರ ಹಾಗೂ ವಿದ್ಯಾರ್ಹತೆಯ ಪ್ರಮಾಣಪತ್ರವನ್ನು ತಂದು ನೇರ ಸಂದರ್ಶನದಲ್ಲಿ ಭಾಗಿಯಾಗಬಹುದು. ಈ ಉದ್ಯೋಗ ಮೇಳದ ಉದ್ದೇಶ, ನಮ್ಮ ತಾಲ್ಲೂಕಿನ ಯುವಜನರು ಒಳ್ಳೆಯ ಉದ್ಯೋಗಿಗಳಾಗಿ ಬದುಕನ್ನು ಚೆನ್ನಾಗಿ ರೂಪಿಸಿಕೊಳ್ಳಲಿ ಎಂಬುದಾಗಿದೆ ಎಂದು ಹೇಳಿದರು.

ಲಯನ್ಸ್ ಇಂಟರ್ ನ್ಯಾಷನಲ್ ಕ್ಲಬ್ ಡಿಸ್ಟ್ರಿಕ್ಟ್ 3179 ಯುವ ಅಭಿವೃದ್ಧಿ ಕಾರ್ಯಕ್ರಮಗಳ ಉಸ್ತುವಾರಿ ಅಜಯ್ ಕೀರ್ತಿ ಮಾತನಾಡಿ, ಲಯನ್ಸ್ ಕ್ಲಬ್ ವತಿಯಿಂದ ಎಂಟು ರೀತಿಯ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ನೇತ್ರ ಚಿಕಿತ್ಸೆ, ಮಧುಮೇಹ ಚಿಕಿತ್ಸೆ, ಉಚಿತವಾಗಿ ಆಹಾರ ವಿತರಣೆ, ಪರಿಸರ ಸ್ನೇಹಿ ಕಾರ್ಯಗಳ ಜೊತೆಯಲ್ಲಿ ಲಯನ್ಸ್ ಅಂಗಸಂಸ್ಥೆಯಾದ ಲಿಯೋ ಕ್ಲಬ್ ವತಿಯಿಂದ ಈಗ ಯುವ ಅಭ್ಯುದಯ ಕಾರ್ಯಕ್ರಮದ ಅಡಿಯಲ್ಲಿ ಉದ್ಯೋಗಮೇಳವನ್ನು ಆಯೋಜಿಸಿದ್ದು ಯುವಜನತೆ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಲಿಯೋ ಕ್ಲಬ್ ಆಫ್ ಕಿರಣ ಕಾರ್ಯದರ್ಶಿ ಎಂ.ಲೋಕೇಶ್, ಸದಸ್ಯ ದುರ್ಗಾ ಪ್ರಸಾದ್, ಲಯನ್ಸ್ ಇಂಟರ್ ನ್ಯಾಷನಲ್ ಕ್ಲಬ್ ಶಿಡ್ಲಘಟ್ಟ ಘಟಕದ ಅಧ್ಯಕ್ಷ ಅಮಾನುಲ್ಲಾ, ಕಾರ್ಯದರ್ಶಿ ಮನೋಹರ್ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version